KARNATAKA
ಡೆಲ್ಟಾ ಪ್ಲಸ್ ಸೋಂಕಿನಿಂದ ಒಬ್ಬರು ಗುಣಮುಖ: ಸಚಿವ ಸುಧಾಕರ್ ಮಾಹಿತಿ
ಬೆಂಗಳೂರು, ಜೂನ್ 25: ರಾಜ್ಯದಲ್ಲಿ ಮತ್ತೆ ಆತಂಕಕ್ಕೆ ಎಡೆಮಾಡಿಕೊಟ್ಟಿರುವ ಕರೊನಾ ರೂಪಾಂತರಿ ವೈರಾಣು ಡೆಲ್ಟಾ ಪ್ಲಸ್ ಸೋಂಕಿನ ಬಗ್ಗೆ ಆಶಾದಾಯಕ ಮಾಹಿತಿ ಹೊರ ಬಿದ್ದಿದೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಈ ವಿಷಯ ತಿಳಿಸಿ, ಮೈಸೂರಿನ ಡೆಲ್ಟಾ ಪ್ಲಸ್ ಕರೊನಾ ಸೋಂಕಿತ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇರುವ ಮತ್ತೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರ ಸಂಪರ್ಕಿತ ಯಾರಿಗು ಸೋಂಕು ಹರಡಿಲ್ಲ ಎಂದು ತಿಳಿಸಿದ್ದಾರೆ.
ಗಡಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಭಯವಿರುವುದು ನಿಜ. ಕೇರಳದಲ್ಲಿ ಶೇ.10ಕ್ಕೂ ಹೆಚ್ಚು ಸೋಂಕಿನ ಪ್ರಮಾಣವಿದ್ದರೆ, ಮಹಾರಾಷ್ಟ್ರದಲ್ಲೂ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಇವೆರಡೂ ರಾಜ್ಯಗಳ ಜೊತೆ ನಮ್ಮ ರಾಜ್ಯ ಗಡಿ ಹಂಚಿಕೊಂಡಿದ್ದರೂ, ಗಡಿ ಮುಚ್ಚುವ ಯಾವುದೇ ಚಿಂತನೆ ಇಲ್ಲವೆಂದು ಸ್ಪಷ್ಟಪಡಿಸಿದರು. ಆದರೆ ಎರಡೂ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಿದ್ದು, ಅಲ್ಲಿಂದ ಬರುವವರಿಗೆ ರಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಈವರೆಗೆ ಎರಡೇ ಕೇಸ್ ದೃಢಪಟ್ಟಿರುವ ಕಾರಣ ದಿಗಿಲುಗೊಳ್ಳುವುದು ಬೇಡವೆಂದು ಜನರಲ್ಲಿ ಮನವಿ ಮಾಡಿಕೊಂಡರು.
ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿಯ ಮೆಡಿಕಲ್ ಕಾಲೇಜುಗಳು ಹಾಗೂ ಮಂಗಳೂರು, ವಿಜಯಪುರದ ಜಿಲ್ಲಾಸ್ಪತ್ರೆಗಳಲ್ಲಿ ಜಿನೋಮ್ ಲ್ಯಾಬ್ ಪ್ರಾರಂಭಿಸಿ, ಡೆಲ್ಟಾ ಪ್ಲಸ್ ಟೆಸ್ಟಿಂಗ್, ಸೀಕ್ವೆನ್ಸ್ ಪತ್ತೆಗೆ ಪ್ರಯತ್ನಿಸಲಾಗುವುದು. ಸಿಎಂ ಬಿಎಸ್ ವೈ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಸಭೆಯಿದ್ದು, ಡೆಲ್ಟಾಪ್ಲಸ್ ರೂಪಾಂತರಿ, ಕರೊನಾ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.