DAKSHINA KANNADA
ಕೊರೊನಾ ಬಂದ ಹಿನ್ನಲೆ ವೃದ್ದೆಯನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾದ ದಂಪತಿಗಳು

ಸುಳ್ಯ: ಕೊರೊನಾ ಬಂದ ಹಿನ್ನಲೆ ವೃದ್ದ ತಾಯಿಯನ್ನು ಮನೆಯೊಳಗೆ ಬಿಟ್ಟು ದಂಪತಿಗಳಿಬ್ಬರು ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗಾಂಧಿನಗರದಲ್ಲಿ ನಡೆದಿದೆ. ಸುಳ್ಯದ ಆಸುಪಾಸಿನಲ್ಲಿ ಬಳೆ ಮಾರಿ ಜೀವನ ಸಾಗಿಸುತ್ತಿದ್ಧ ದಂಪತಿಗಳಿಬ್ಬರು ವೃದ್ದ ತಾಯಿಯ ಜತೆ ಗಾಂಧಿನಗರದಲ್ಲಿನ ಕಟ್ಟಡದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ದಂಪತಿಗಳಿಬ್ಬರಿಗೆ ಕಳೆದ ವಾರ ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಆಗಿ ಬಂದಿತ್ತು. ಈ ವಿಷಯ ಅರಿತ ಆ ದಂಪತಿಗಳು ಶನಿವಾರ ತಾವಿದ್ದ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಹೋಗಿದ್ದಾರೆ . ನಿನ್ನೆ ಮನೆಯೊಳಗಿದ್ದ ವೃದ್ದೆ ಮನೆಯೊಳಗೆ ಬೊಬ್ಬಿಡುತ್ತಿರುವುದನ್ನು ಕಂಡ ಸ್ಥಳೀಯರು ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಎಸ್. ಐ. ಹರೀಶ್ ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರು ಬಾಗಿಲು ತೆರೆದು ವೃದ್ದೆಯನ್ನು ವಿಚಾರಿಸಿದ್ದಾರೆ.

ಮೂರು ದಿನದಿಂದ ಉಪವಾಸದಲ್ಲಿದ್ದ ವೃದ್ದೆಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ರ ನೇತ್ರತ್ವದಲ್ಲಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಇದೀಗ ಏಕಾಎಕಿ ಕಣ್ಮರೆಯಾದ ದಂಪತಿ ಹುಡುಕಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.