LATEST NEWS
ತಮಿಳುನಾಡು – ಸರ್ವಿಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಡಿಐಜಿ
ಕೊಯಮತ್ತೂರು ಜುಲೈ 7: ಕೊಯಮತ್ತೂರಿನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಸಿ ವಿಜಯಕುಮಾರ್ ತಮ್ಮ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ 6.45 ರ ಸುಮಾರು ವಾಯು ವಿಹಾರ ಮುಗಿಸಿ ಬಂದ ನಂತರ ನೇರವಾಗಿ ತಮ್ಮ ಗೃಹ ಕಚೇರಿಯ ಒಳಗೆ ಹೋಗಿ ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಅವರು ತಮ್ಮ ಕುಟುಂಬದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. 2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯ್‌ಕುಮಾರ್ ಅವರು ತಮಿಳುನಾಡಿನ ಕೊಯಮತ್ತೂರು ವಲಯದ ಡಿಐಜಿ ಆಗಿದ್ದರು ಮತ್ತು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಕ್ಯಾಂಪ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
ಈ ದುರಂತ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಕೊಯಮತ್ತೂರು ವಲಯಕ್ಕೆ ಡೆಪ್ಯೂಟಿ ಐಜಿಪಿಯಾಗಿ ಬರುವ ಮೊದಲು ಚೆನ್ನೈನ ಅಣ್ಣಾ ನಗರ್ ಡಿಸಿಪಿಯಾಗಿದ್ದರು. ಅವರ ದುರಂತ ಸಾವಿಗೆ ಸಿಎಂ ಎಂಕೆ ಸ್ಟಾಲಿನ್ ಅವರು ಆಘಾತ ವ್ಯಕ್ತಪಡಿಸಿದ್ದು, ತಮಿಳುನಾಡು ಪೊಲೀಸ್ ಇಲಾಖೆಗೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.