LATEST NEWS
ತೈಲ ಬೆಲೆ ಏರಿಕೆ- ಪೆಟ್ರೋಲ್ ಮೂರು ವರ್ಷಗಳಲ್ಲಿ ಅತ್ಯಧಿಕ ಬೆಲೆ
ನವದೆಹಲಿ ಅಗಸ್ಟ್ 27 : ಜುಲೈ ಆರಂಭದಿಂದ ಪೆಟ್ರೋಲ್ ದರ ಲೀಟರ್ ಗೆ 6 ರೂಪಾಯಿ ಏರಿಕೆಯಾಗಿದೆ. ಇದು ಮೂರು ವರ್ಷಗಳಲ್ಲಿ ಅತ್ಯಧಿಕ ಬೆಲೆಯಾಗಿದೆ. ದಿನ ನಿತ್ಯದ ಸಣ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ದರ ಏರಿಕೆ ಈಗ ಈ ಮಟ್ಟಕ್ಕೆ ತಲುಪಿದೆ.
ಡೀಸೆಲ್ ಬೆಲೆ 3.67 ರೂಪಾಯಿ ಏರಿಕೆಯಾಗಿದ್ದು ಈಗ ದೆಹಲಿಯಲ್ಲಿ ಲೀಟರ್ ಗೆ 57.03 ರೂಪಾಯಿ ಯಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ಡಿಸೆಲ್ ನ ಅತಿ ಹೆಚ್ಚು ಬೆಲೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಲೀಟರ್ 69.04 ರೂಪಾಯಿ ಇದ್ದು , ಇದು ಅಗಸ್ಟ್ 2014ರಲ್ಲಿ 70.33 ರೂಪಾಯಿ ಇತ್ತು. ಈ ಹಿನ್ನಲೆಯಲ್ಲಿ ಪೆಟ್ರೋಲ್ ಬೆಲೆ ಮೂರು ವರ್ಷಗಳ ಹಿಂದಿನ ದರ ತಲುಪುವ ಸಾಧ್ಯತೆ ಇದೆ.
2017ರ ಜೂನ್ ನಿಂದ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು 15 ವರ್ಷಗಳ ಹಳೆಯ ಅಭ್ಯಾಸವಾದ ತಿಂಗಳ 1 ಮತ್ತು 16ನೇ ತಾರಿಕು ತೈಲ ಬೆಲೆ ಪರಿಷ್ಕರಿಸುವ ನಿಯಮವನ್ನು ಕೈ ಬಿಟ್ಟು ದೈನಂದಿನ ಬೆಲೆ ಪರಿಷ್ಕರಣೆಯನ್ನು ರೂಡಿಸಿಕೊಂಡಿದ್ದವು. ಈ ಪರಿಣಾಮ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳು ದಿನನಿತ್ಯ ಪರಿಷ್ಕರಣೆಗೊಳಪಡುತ್ತಿದ್ದವು.
ಜೂನ್ ನಿಂದ ದೈನಂದಿನ ಬೆಲೆ ಪರಿಷ್ಕರಣೆ ಮಾಡಲು ಆರಂಭಿಸಿದ ನಂತರ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ನಿರಂತರ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಜುಲೈ 3 ರ ನಂತರ ಏರಿಕೆ ಆರಂಭಿಸಿದ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಈಗ ಮೂರು ವರ್ಷಗಳ ಹಳೆಯ ಬೆಲೆಯತ್ತ ಸಾಗುತ್ತಿದೆ.
ಈ ಹಿಂದೆ ತಿಂಗಳ 1 ಮತ್ತು 16ನೇ ದಿನಾಂಕದಂದು ಬೆಲೆ ಪರಿಷ್ಕರಣೆ ಸಂದರ್ಭದಲ್ಲಿ 2 ರೂಪಾಯಿ ಅಥವಾ 3 ರೂಪಾಯಿ ಏರಿಕೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡುತ್ತಿತ್ತು. ಆದರೆ ಈಗ ದೈನಂದಿನ ಪರಿಷ್ಕರಣೆಯಲ್ಲಿ ಕೇವಲ 10 , 15 ಪೈಸೆ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಬೆಲೆ ಏರಿಕೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಈ ಹಿನ್ನಲೆ ಸಣ್ಣಮಟ್ಟದ ಏರಿಕೆ ಈಗ 3 ವರ್ಷಗಳ ಹಿಂದಿನ ತೈಲ ಬೆಲೆಗೆ ಸಮನಾಗಿ ಬಂದು ನಿಂತಿದೆ.
ಇದೇ ರೀತಿ ತೈಲ ಬೆಲೆ ಏರಿಕೆ ಮುಂದುವರೆದರೆ ಪೆಟ್ರೋಲ್ ಹಾಗೂ ಡಿಸೇಲ್ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ.