Connect with us

DAKSHINA KANNADA

ದಕ್ಷಿಣ ಕನ್ನಡದ ‘ಮರಳು ಸಮಸ್ಯೆಗೆ ಅಧಿಕಾರಿಗಳೇ ಕಾರಣ : ಸಿವಿಲ್ ಗುತ್ತಿಗೆದಾರರ ಒಕ್ಕೂಟ ಆರೋಪ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸೃಷ್ಟಿಯಾದ ಮರಳಿನ ಅಭಾವಕ್ಕೆ ಅಧಿಕಾರಿಗಳೆ ಕಾರಣ ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್‌ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ. ಈ ಸಮಸ್ಯೆಗೆ 10 ದಿನದೊಳಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿನ ಸಮಸ್ಯೆ ಸೃಷ್ಟಿಯಾಗಿದೆ. ಕೆಲವು ವರ್ಷಗಳ ಹಿಂದೆ ಕೇವಲ 800 ರೂ.ಗೆ ಮರಳು ಸಿಗುತ್ತಿತ್ತು. ಇಂದು ಅದರ ಬೆಲೆ 21 ಸಾವಿರಕ್ಕೇರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಮನೆ, ಕಟ್ಟಡಗಳನ್ನು ನಿರ್ಮಿಸಲಾಗದ ಸ್ಥಿತಿಯಲ್ಲಿದ್ದಾರೆ. ಮರಳಿನ ಅಭಾವದಿಂದಾಗಿ ಯಾವುದೇ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು, ಮರದ ಕೆಲಸ ಗಾರರು, ಕಬ್ಬಿಣದ ಕೆಲಸಗಾರರು, ಪೈಂಟರ್‌ಗಳು, ಇಂಜಿನಿಯರ್‌ಗಳು, ಸೈಟ್ ಸೂಪರ್‌ವೈಸರ್‌ಗಳು ಮತ್ತವರ ಕುಟುಂಬದ ಸದಸ್ಯರು ಉಪವಾಸ ಬೀಳುವ ಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮರಳಿನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದಾಗ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಆದರೆ, ಜಿಲ್ಲಾಧಿಕಾರಿ, ಗಣಿ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ, ಸಚಿವರ ನಿರ್ದೇಶನವನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮರಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗು ತ್ತದೆ. ಇದರ ನೇರ ಪರಿಣಾಮ ಸರಕಾರದ ರಾಯಧನದ ಮೇಲಾಗುತ್ತಿವೆ. ಜಿಲ್ಲೆಯ ಎಂ. ಸ್ಯಾಂಡ್‌ನ ಗುಣಮಟ್ಟನೂ ಚೆನ್ನಾಗಿಲ್ಲ. ಆದ್ದರಿಂದ ಕಟ್ಟಡಗಳ ಮಾಲಕರು ಎಂ.ಸ್ಯಾಂಡ್ ಬಳಕೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಕಟ್ಟಡ ನಿರ್ಮಾಣ ಉದ್ಯಮವು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಕಟ್ಟಡ ಮತ್ತಿತರ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಅಸೋಸಿಯೇಶನ್‌ನ ಪದಾಧಿಕಾರಿಗಳಾದ ದಿನಕರ್ ಸುವರ್ಣ, ದೇವಾನಂದ, ಕೆನರಾ ಬಿಲ್ಡರ್ ಅಸೋಸಿಯೇಶನ್‌ನ ಬಾಲಸುಬ್ರಹ್ಮಣ್ಯ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‌ನ ವಿಜಯ ವಿಷ್ಣು ಮಯ್ಯ ಮತ್ತು ಏಕನಾಥ ದಂಡಕೇರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಸಿಮೆಂಟ್ ಅಸೋಸಿಯೇಶನ್‌ನ ಪುರುಷೋತ್ತಮ ಶೆಣೈ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *