BELTHANGADI
ನಂದಾದೀಪ ಆರಿದ ವದಂತಿಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ
ನಂದಾದೀಪ ಆರಿದ ವದಂತಿಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ
ಬೆಳ್ತಂಗಡಿ ಮಾ.27: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇವಳದಲ್ಲಿ ದೇವರ ನಂದಾದೀಪ ನಂದಿದ ಎಂಬ ಅಪಪ್ರಚಾರಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಕೂಡ ಬಂದ್ ಮಾಡಲಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಮಾಡಿದೆ.
ಮಂಜುನಾಥನ ಸನ್ನಿಧಿ ಧರ್ಮಸ್ಥಳದಲ್ಲಿ ದೀಪ ಆರಿದೆ. ಇದರಿಂದ ನಾಡಿಗೆ ಕಂಟಕ ಕಾದಿದೆ ಎಂಬ ವದಂತಿ ಪೋಸ್ಟ್ ಹಿನ್ನೆಲೆ ದಾವಣಗೆರೆಯ ಜನರು ಹೆದರಿ ರಾತ್ರಿಯಿಡೀ ಮನೆ ಮುಂದೆ ದೀಪ ಬೆಳಗಿಸಿದ್ದಾರೆ. ಮುಂಬರುವ ಕಂಟಕವನ್ನು ತಪ್ಪಿಸಲು ಮನೆ ಬಾಗಿಲಿಗೆ ದೀಪ ಹಚ್ಚಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಈ ವೈರಲ್ ಪೋಸ್ಟ್ ಗೆ ರಾಜ್ಯದ ಜನ ಬೆದರಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಮಂಜುನಾಥ ದೇವಳದಲ್ಲಿ ದೇವರ ನಂದಾದೀಪ ನಂದಿದೆ ಎಂಬ ಅಪಪ್ರಚಾರ ಮಾತುಗಳು ಹರಡುತ್ತಿವೆ. ಇಂತಹ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿನಂತಿ ಮಾಡಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿ ದೇವಳದಲ್ಲಿ ರಾತ್ರಿ 8 ಗಂಟೆಗೆ ಬಾಗಿಲು ಹಾಕಲಾಗುತ್ತದೆ. ಮರುದಿನ ಮುಂಜಾನೆ 5 ಗಂಟೆಗೆ ಬಾಗಿಲು ತೆಗೆಯಲಾಗುತ್ತದೆ. ಈ ನಡುವೆ ಯಾರೊಬ್ಬರಿಗೂ ದೇವಳ ಪ್ರವೇಶಿಸುವ ಅವಕಾಶ ಇರುವುದಿಲ್ಲ.
ಈ ಅವಧಿಯಲ್ಲಿ ದೇವಳ ಪ್ರವೇಶಿಸಿರುವವರು ಯಾರು ಮತ್ತು ಅಲ್ಲಿ ನಂದಾದೀಪ ನಂದಿರುವುದನ್ನು ನೋಡಿರುವವರು ಯಾರು ಎಂದು ಪ್ರಶ್ನಿಸಿರುವ ಡಾ.ಹೆಗ್ಗಡೆ, ಇದು ದೇವಳದ ಭಕ್ತಾದಿಗಳ ಭಾವನೆ ಮತ್ತು ನಂಬಿಕೆಗಳೊಂದಿಗೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂತಹ ವದಂತಿಗಳಿಂದ ದೂರವಿದ್ದು, ಕೊರೋನ ಎಂಬ ಮಹಾಮಾರಿಯನ್ನು ದೂರ ಮಾಡುವ ಉದ್ದೇಶದಿಂದ ಎಲ್ಲರೂ ಮನೆಯ ಒಳಗಡೆಯೇ ಇದ್ದು ದೇವರಲ್ಲಿ ಪ್ರಾರ್ಥಿಸುವಂತೆ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.