KARNATAKA
ಗರ್ಭ ಧರಿಸದೇ ಹಾಲು ಕೊಡುವ 9 ತಿಂಗಳ ಕರು…!
ಚಿತ್ರದುರ್ಗ. ಎಪ್ರಿಲ್ 04: ಒಂಬತ್ತು ತಿಂಗಳ ಕರು ಗರ್ಭ ಧರಿಸದೇ ಹಾಲು ನೀಡುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಭರಮಸಾಗರ ತಾಲ್ಲೂಕಿನ ಚಿಕ್ಕಕಬ್ಬಿಗೆರೆ ಗ್ರಾಮದ ದೇವರಾಜು ಎಂಬುವರು ಸಾಕಿದ್ದ ಎಚ್.ಎಫ್. ತಳಿಯ ಹಸು 9 ತಿಂಗಳ ಹಿಂದೆ ಈ ಕರುವಿಗೆ ಜನ್ಮ ನೀಡಿತ್ತು.
ಈಗ ಆ ಕರುವೇ ಹಾಲು ನೀಡಲು ಆರಂಭಿಸಿದೆ. ಇಂತಹ ಘಟನೆಯನ್ನು ತಾವು ಹಿಂದೆ ಕಂಡಿಲ್ಲ. ಇದು ಗ್ರಾಮಸ್ಥರಲ್ಲಿ ಬೆರಗು ಮೂಡಿಸಿದೆ’ ಎನ್ನುತ್ತಾರೆ ದೇವರಾಜ್. ಕರು ಹಸುವಿನ ದೈಹಿಕ ಬದಲಾವಣೆ ಗಮನಿಸುತ್ತಿದ್ದ ಅವರಿಗೆ ಕೆಲವು ದಿನಗಳಿಂದ ಅದರ ಕೆಚ್ಚಲು ದೊಡ್ಡದಾಗಿ ಹಾಲು ತುಂಬಿಕೊಳ್ಳುತ್ತಿರುವ ವಿಷಯ ಗೊತ್ತಾಗಿದೆ.
ಈ ವಿಷಯವನ್ನು ಚಿತ್ರದುರ್ಗ ಉಪನಿರ್ದೇಶಕರ ಕಚೇರಿಯ ಜಾನುವಾರು ಅಭಿವೃದ್ಧಿ ಅಧಿಕಾರಿ ಎಂ. ಮರುಳಸಿದ್ದಯ್ಯ ಅವರ ಗಮನಕ್ಕೆ ತಂದಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಹಸುವನ್ನು ಪರೀಕ್ಷಿಸಿದ ಅವರು ನಿತ್ಯ ಹಾಲು ಕರೆಯುವಂತೆ ಕುಟುಂಬದವರಿಗೆ ಸಲಹೆ ನೀಡಿದ್ದಾರೆ.
ಕೆಲವು ಸಂದರ್ಭದಲ್ಲಿ ಎಚ್.ಎಫ್. ತಳಿಯ ಜಾನುವಾರಿನಲ್ಲಿ ದೈಹಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ರೈತರು ಜಾನುವಾರಿಗೆ ನೀಡುವ ಆಹಾರ ಕ್ರಮ, ಮೇವು, ಬೂಸಾ ನೀಡುವ ಪದ್ಧತಿಯಿಂದ ಕೂಡ ಕೆಲವೊಮ್ಮೆ ಅಸಹಜ ಬೆಳವಣಿಗೆ ಕಂಡುಬರುತ್ತದೆ. ಇದೊಂದು ಅಪರೂಪದ ಪ್ರಕರಣ. ಎಚ್.ಎಫ್. ತಳಿಯ ಜಾನುವಾರು ಸಾಮಾನ್ಯವಾಗಿ 22ರಿಂದ 24 ತಿಂಗಳಲ್ಲಿ ಈಡಿಗೆ ಬರುತ್ತವೆ’ ಎಂದು ಜಾನುವಾರು ಅಭಿವೃದ್ಧಿ ಅಧಿಕಾರಿ ಮರುಳಸಿದ್ದಯ್ಯ ತಿಳಿಸಿದ್ದಾರೆ.