KARNATAKA
ಕೋಟೆಕಾರ್ ಬ್ಯಾಂಕ್ ದರೋಡೆಗಿಂತಲೂ ಅತಿ ದೊಡ್ಡ ಚಿನ್ನ ದರೋಡೆ ಪ್ರಕರಣ – ಆರು ತಿಂಗಳ ಬಳಿಕ ಸಿಕ್ಕಿಬಿದ್ದ ದರೋಡೆಕೋರರು

ದಾವಣಗೆರೆ ಮಾರ್ಚ್ 31: ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವೇ ರಾಜ್ಯದ ಅತೀದೊಡ್ಡ ದರೋಡೆ ಪ್ರಕರಣ ಎಂದುಕೊಳ್ಳುವ ಮೊದಲೆ ಇದೀಗ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬರೋಬ್ಬರಿ 6 ತಿಂಗಳ ಬಳಿಕ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಪ್ರಮುಖ ಆರೋಪಿಗಳಾದ ತಮಿಳುನಾಡು ಮೂಲದ ಸಹೋದರರಾದ ಅಜಯ್ ಹಾಗೂ ವಿಜಯ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿ ಸುಮಾರು 13 ಕೋಟಿ ಮೌಲ್ಯದ 17 ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2024ರ ಅಕ್ಟೋಬರ್ 28ರಂದು ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನಲ್ಲಿ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಆರೋಪಿಗಳು ದರೋಡೆ ಪ್ರಕರಣವನ್ನು ಪಕ್ಕಾ ಪ್ಲ್ಯಾನ್ ಮಾಡಿ ಮಾಡಿದ್ದು, ಎಲ್ಲೂ ಸಣ್ಣ ಸುಳಿವನ್ನು ಪೊಲೀಸರಿಗೆ ಬಿಟ್ಟಕೊಟ್ಟಿಲ್ಲ. ಆದರೂ ಕರ್ನಾಟಕ ಪೊಲೀಸರು ಮತ್ತೊಮ್ಮೆ ತಮ್ಮ ಕಾರ್ಯಕ್ಷಮತೆಯನ್ನು ದೇಶಕ್ಕೆ ತೋರಿಸಿದ್ದಾರೆ.
ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಮನಿ ಹೆಸ್ಟ್ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಇನ್ನು ಆರೋಪಿಗಳು ಮೊಬೈಲ್, ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಇಟ್ಟಿದ್ದರು.
ವಿಜಯ್‌ಕುಮಾರ್(30), ಸೋದರ ಅಜಯ್‌ಕುಮಾರ್(28), ಬೆಳಗುತ್ತಿಯ ಅಭಿಷೇಕ(23), ಸುರಹೊನ್ನೆ ಗ್ರಾಮದವರಾದ ಚಂದ್ರ(23), ಮಂಜುನಾಥ(32), ಪರಮಾನಂದ(30)ನನ್ನು ಬಂಧಿಸಲಾಗಿದೆ.