BANTWAL
ಬರಡು ಭೂಮಿಯಲ್ಲೀಗ ಹಸಿರು ಕ್ರಾಂತಿ,ಒಣ ಭೂಮಿಯಲ್ಲಿ ಜೀವಸೆಲೆ ತಂದ ಬಂಟ್ವಾಳದ ಭಗೀರಥ ..!

ಬಂಟ್ವಾಳ : ಛಲ ಒಂದಿದ್ದರೆ ಸಾಕು ಏನೂ ಬೇಕಾದರೂ ಸಾಧಿಸಬಹುದು. ನರೇಗಾ ಯೋಜನೆಯಡಿ ಕರಾವಳಿಯ ವ್ಯಕ್ತಿಯೊಬ್ಬರು 100ಕ್ಕಿಂತ ಹೆಚ್ಚು ಇಂಗುಗುಂಡಿಗಳನ್ನು ರಚಿಸಿ 40 ವರ್ಷಗಳ ಹಿಂದೆ ಕೊರೆದ ಸುರಂಗಕ್ಕೆ ಜೀವಕಳೆ ತರುವ ಮೂಲಕ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಜೊತೆಗೆ ಬರಡಾಗಿದ್ದ ಭೂಮಿಯನ್ನು ಹಸಿರಾಗಿರಿಸುವ ಮೂಲಕ ಹಸಿರು ಕ್ರಾಂತಿಗೆ ಮುನ್ನಡಿ ಬರೆದಿದ್ದಾರೆ.
ಇವರು ಸುಬ್ರಹ್ಮಣ್ಯ ಭಟ್. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಮೂಲೆ ಗೋವಿಂದಭಟ್ ಅವರ ಪುತ್ರ. ಕೃಷಿಕರಾಗಿರುವ ಈ ಸುಬ್ರಹ್ಮಣ್ಯ ಭಟ್ ಗೆ ತನ್ನ ಮನೆ ಹಿಂಭಾಗದಲ್ಲಿರುವ ದರೆಯಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿದ್ದ 25-27 ಮೀ ಉದ್ದ ಕೊರೆದ ಸುರಂಗದಲ್ಲಿ ಬರುವ ನೀರೇ ಮನೆಗೆ ಆಧಾರ. ಮುಕ್ಕಾಲು ಇಂಚು ಪೈಪ್ ಮೂಲಕ ದಿನದ 24 ಗಂಟೆಯೂ ಶುದ್ಧ ನೀರು ಹರಿಯುತ್ತದೆ. ಅಡುಗೆ, ಕುಡಿಯಲು ಸೇರಿ ಮನೆ ಬಳಕೆಗೆ ಇದರ ನೀರನ್ನೇ ಬಳಸುತ್ತಾರೆ. ಹೀಗಿರುವಂತೆ ಕಳೆದ ಬಾರಿ ಸಕಾಲಕ್ಕೆ ಮಳೆ ಸುರಿಯದ್ದರಿಂದ ಸುರಂಗದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ನೀರಿನ ಕೊರತೆಯಿಂದ ಮನೆಯಲ್ಲಿ ತೊಂದರೆ ಅನುಭವಿಸುವಂತಾಗಿತ್ತು.

ಈ ಬಗ್ಗೆ ಜಲತಜ್ಞರಾದ ಶ್ರೀಪಡ್ರೆಯವರೊಂದಿಗೆ ಚರ್ಚಿಸಿದಾಗ ಮನೆ ಹಿಂಭಾಗದ ಜಾಗದಲ್ಲಿ ಇಂಗುಗುಂಡಿ ನಿರ್ಮಿಸಲು ಸಲಹೆ ನೀಡಿದ್ದರು. ನರೇಗಾ ಐಇಸಿ ಕಾರ್ಯಕ್ರಮದಡಿ ವಿಷಯ ತಿಳಿದಿದ್ದ ಸುಬ್ರಹ್ಮಣ್ಯ ಭಟ್ ಉದ್ಯೋಗ ಖಾತರಿ ಯೋಜನೆಯಡಿ ಇಂಗುಗುಂಡಿ ರಚಿಸಬಹುದೆಂದು ಸ್ಥಳೀಯ ಗ್ರಾಮ ಪಂಚಾಯತ್‌ಗೆ 2022-23ರಲ್ಲಿ ಅರ್ಜಿ ಸಲ್ಲಿಸಿ 6 ಅಡಿ ಉದ್ದ, 2 ಅಡಿ ಅಗಲ, 2 ಅಡಿ ಆಳದ 100 ಇಂಗುಗುಂಡಿಗಳನ್ನು ರಚಿಸಿದ್ದಾರೆ. ಆ ವರ್ಷದಲ್ಲಿ ಸುರಿದ ಮಳೆಗೆ ಮಳೆ ನೀರು ಇಂಗುಗುಂಡಿಗಳಲ್ಲಿ ಚೆನ್ನಾಗಿ ಇಂಗಿದ್ದು, ಇದರಿಂದ ಸುರಂಗದಲ್ಲೂ ನೀರಿನ ಹರಿವು ಹೆಚ್ಚಾಗಿದೆ. 2022-23ರಲ್ಲಿ ನಿರ್ಮಿಸಿದ ಇಂಗುಗುಂಡಿ ಕಾಮಗಾರಿಗೆ 25,102 ರೂ. ಸಹಾಯಧನ ಪಡೆದಿದ್ದಾರೆ. ಇಂಗುಗುಂಡಿಯ ಅಕ್ಕಪಕ್ಕದ ಸ್ಥಳದಲ್ಲಿ ಗೇರು ಕೃಷಿ ಮಾಡಿದ್ದು, ಇದರಿಂದ ಬೀಳುವ ತರಗೆಲೆ ಇಂಗುಗುಂಡಿಯಲ್ಲಿ ಶೇಖರಣೆಯಾಗಿ ಮಳೆ ನೀರು ಬಿದ್ದಾಗ ಕೊಳೆತು ಗೊಬ್ಬರವಾಗುವುದರಿಂದ ಮಣ್ಣಿನ ಫಲವತ್ತತೆಗೂ ಸಹಕಾರಿಯಾಗುತ್ತದೆ.
ಮನೆಯ ಇನ್ನೊಂದು ಭಾಗದಲ್ಲಿ 25-30 ವರ್ಷದ ಹಿಂದೆ 18 -20ಮೀ ಉದ್ದದ ಸುರಂಗ ಕೊರೆದಿದ್ದು, ಇದಕ್ಕಾಗಿ 25 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಇದರಲ್ಲಿ ನೀರು ಸಂಗ್ರಹಿಸಿ ಪೈಪ್ ಮೂಲಕ ತೆಂಗು ಕೃಷಿಗೆ ಹನಿ ನೀರಾವರಿ ಪದ್ಧತಿಯಡಿ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ದನಗಳಿಗೆ ಕುಡಿಯಲು ಹಾಗೂ ಹಟ್ಟಿ ಸ್ವಚ್ಛ ಮಾಡಲು ಇದೇ ನೀರನ್ನು ಬಳಸಲಾಗುತ್ತಿದೆ. ಇಂಗುಗುಂಡಿ ನಿರ್ಮಾಣದ ಬಳಿಕ ಮಾರ್ಚ್ವರೆಗೆ ನೀರಿನ ಲಭ್ಯತೆ ಇರುತ್ತದೆ.ಕೃಷಿಕರಾಗಿರುವ ಸುಬ್ರಹ್ಮಣ್ಯ ಭಟ್ ಅವರಿಗೆ 2 ಎಕರೆಯಷ್ಟು ಜಾಗವಿದ್ದು, ಅಡಕೆ, ತೆಂಗು, ಕ್ಕೊಕ್ಕೋ, ಕರಿಮೆಣಸು ಸೇರಿದಂತೆ ಮನೆ ಬಳಕೆಗೆ ಬೇಕಾದ ತರಕಾರಿ ಬೆಳೆಯುತ್ತಾರೆ. ಕೃಷಿಗೆ ಬೇಕಾದ ನೀರಿಗೆ ಬಾವಿ ತೋಟದ ಸಮೀಪವೇ ಇದ್ದು, ಇದರ ನೀರನ್ನು ಬೆಳೆಗಳಿಗೆ ಹನಿ ನೀರಾವರಿ ಮೂಲಕ ಹರಿಸುತ್ತಾರೆ. ಈ ಬಾರಿಯೂ ನರೇಗಾದಡಿ 100 ಇಂಗುಗುಂಡಿ ನಿರ್ಮಾಣ ಮಾಡಿದ್ದು, ಈ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಂಡು ಕೃಷಿಕರಿಗೆ ಮಾದರಿಯಾಗಿದ್ದಾರೆ.
ಬಹಳ ಹಿಂದೆ ಒಂದು ವರ್ಷ ಬರಗಾಲ ಬಂದಿದ್ದರಿಂದ 40 ವರ್ಷದ ಹಿಂದೆ ಮನೆ ಹಿಂಭಾಗದಲ್ಲಿ ದರೆಯಲ್ಲಿ ನೀರಿನ ಅಂಶ ಕಂಡು ಮನೆಯಲ್ಲಿ ಕೆಲಸಕ್ಕಿದ್ದ ಐತ್ತಪ್ಪ ನಾಯ್ಕ ಎಂಬುವವರು ಸುರಂಗ ಕೊರೆಯುವ ಸಲಹೆ ನೀಡಿದ್ದು, ಬೇಡ ಅನಿಸಿದರೂ ಒಂದು ಪ್ರಯತ್ನ ಎಂಬಂತೆ ಕೊರೆಯಲು ಶುರು ಮಾಡಿದ್ದಾರೆ. ಆರಂಭದಲ್ಲಿ ಮೃದು ಮಣ್ಣು ಆಗಿದ್ದರಿಂದ ಏನೂ ಕಷ್ಟವಾಗಿರಲಿಲ್ಲ. ನಂತರದ ದಿನಗಳಲ್ಲಿ ಕರ್ಗಲ್ಲು ಸಿಕ್ಕಾಗ ಕಷ್ಟವಾಗಿತ್ತು. ಅದಾಗಲೇ 25-27ಮೀ ಮೀ.ನಷ್ಟು ಸುರಂಗ ಕೊರೆದಿದ್ದು, ನಂತರ ಕೊರೆಯಲು ಸಾಧ್ಯವಿಲ್ಲ ಎಂದು ಕೆಲಸ ನಿಲ್ಲಿಸಲಾಯಿತು. ಆ ವೇಳೆಗೆ ನೀರಿನ ಒರತೆ ಸಿಕ್ಕಿತ್ತು. 20 ಅಡಿಯಲ್ಲಿ ಅಡ್ಡಲಾಗಿ ಮಣ್ಣಿನ ದಿಣ್ಣೆ ಮಾಡಿ ಅದಕ್ಕೆ ಮುಕ್ಕಾಲು ಇಂಚಿನ ಪೈಪ್ ಅಳವಡಿಸಿ ನೀರು ಹರಿಯುವಂತೆ ಮಾಡಲಾಗಿದೆ.
ಇಂಗುಗುಂಡಿ ನಿರ್ಮಾಣದಿಂದ ಸುರಂಗಕ್ಕೆ ಜೀವಕಳೆ ಬಂದಿದ್ದು, ವೈಯಕ್ತಿಕವಾಗಿ ತುಂಬಾ ಪ್ರಯೋಜನವಾಗಿದ್ದರಿಂದ ನರೇಗಾ ಯೋಜನೆಯಡಿ ಈ ಬಾರಿ ಮತ್ತೆ 100 ಇಂಗುಗುಂಡಿಗಳನ್ನು ರಚಿಸಿದ್ದೇನೆ. ಇಂಗುಗುಂಡಿ ನಿರ್ಮಿಸಿದ್ದರಿಂದ ಸುರಂಗದಲ್ಲಿ ನೀರಿನ ಕೊರತೆ ಉಂಟಾಗಿರುವುದಿಲ್ಲ. ಗ್ರಾಮ ಪಂಚಾಯತ್‌ನಲ್ಲಿ ಐಇಸಿ ಕಾರ್ಯಕ್ರಮದಡಿ ಯೋಜನೆಯ ಕುರಿತು ಮಾಹಿತಿ ಪಡೆದಿದ್ದರಿಂದ ಕಾಮಗಾರಿ ಕೈಗೊಳ್ಳಲು ಸಹಕಾರಿಯಾಗಿದೆ. ಯೋಜನೆಯ ಸವಲತ್ತು ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಸುಬ್ರಹ್ಮಣ್ಯ ಭಟ್.