LATEST NEWS
ಸೌಜನ್ಯ ಪರ ಹೋರಾಟ – ರಾಜ್ಯದಲ್ಲೇ ಅತೀ ಹೆಚ್ಚು ನೋಟಾ ಮತ ಚಲಾವಣೆ
ಮಂಗಳೂರು ಜೂನ್ 05 : ಲೋಕಸಭಾ ಚುನಾವಣೆ ಮುಗಿದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವುದರೊಂದಿಗೆ ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಜಿಲ್ಲೆಯಲ್ಲಿ ಕಾಂಗ್ರೇಸ್ ಬಿಜೆಪಿ ಭರ್ಜರಿಯಾಗಿ ಪೈಟ್ ಕೊಟ್ಟಿದ್ದು, ಕಾಂಗ್ರೇಸ್ ಒಂದು ರೀತಿ ಸೋತು ಗೆದ್ದಂತಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಅತೀ ಹೆಚ್ಚು ನೋಟಾ ಮತ ಚಲಾವಣೆಯಾಗುವ ಮೂಲಕ ಗಮನ ಸೆಳೆದಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ 23,576 ಮತಗಳು ದೊರೆತಿದ್ದು, ರಾಜ್ಯದಲ್ಲೇ ಇದು ಗರಿಷ್ಠವಾಗಿದೆ. ನೋಟಾಕ್ಕೆ 11,191 ಮತ ದಾಖಲಾಗಿರುವ ಉಡುಪಿ– ಚಿಕ್ಕಮಗಳೂರು ಕ್ಷೇತ್ರ ದ್ವಿತೀಯ ಸ್ಥಾನದಲ್ಲಿದೆ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಂತರದ ಸ್ಥಾನ ನೋಟಾಕ್ಕೆ ದೊರೆತಿದೆ.
ಬೆಳ್ತಂಗಡಿ ತಾಲ್ಲೂಕಿನ ಸೌಜನ್ಯಾ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಚುನಾವಣೆಗೆ ಒಂದು ತಿಂಗಳು ಪೂರ್ವದಿಂದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧೆಡೆ ನೋಟಾ ಅಭಿಯಾನದ ಸಭೆಗಳು ನಡೆದಿದ್ದವು. ಮತದಾನದ ದಿನ ಕಡಬ ತಾಲ್ಲೂಕು ಕೌಕ್ರಾಡಿ ಪಂಚಾಯಿತಿಯ ಇಚ್ಲಂಪಾಡಿ ಮತಗಟ್ಟೆಯ ಹೊರ ಆವರಣದಲ್ಲಿ ರಾಜಕೀಯ ಪಕ್ಷಗಳ ಟೆಂಟ್ ಜೊತೆಗೆ ತಲೆಎತ್ತಿದ್ದ ‘ನೋಟಾ ಅಭಿಯಾನ’ದ ಟೆಂಟ್ ಗಮನ ಸೆಳೆದಿತ್ತು.