DAKSHINA KANNADA
ಡಿಕೆಶಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ- ಕಾವು ಹೇಮನಾಥ ಶೆಟ್ಟಿ
ಪುತ್ತೂರು, ಡಿಸೆಂಬರ್ 08: ಕೆ.ಪಿ.ಸಿ.ಸಿ ಸಂಯೋಜಕ ಸ್ಥಾನದಿಂದ ವಿಮುಕ್ತಿಗೊಳಿಸಿದ ಬಗ್ಗೆ ಯಾವುದೇ ಮಾಹಿತಿ ಗಮನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಪುತ್ತೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನನ್ನು ಕೆ.ಪಿ.ಸಿ.ಸಿ ಸಂಯೋಜಕ ಸ್ಥಾನದಿಂದ ವಿಮುಕ್ತಿಗೊಳಿಸಿದ್ದಾರೆ ಎನ್ನುವ ಸುದ್ಧಿ ಕೆಲವು ವೆಬ್ ಸೈಟ್ ಗಳಲ್ಲಿ ಭಿತ್ತರವಾಗುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಆರ್.ಎಸ್.ಎಸ್ ಹಾಗು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಆಶೋಕ್ ರೈ ಯವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಪಕ್ಷದ ಹಿತೈಷಿಗಳು ನಡೆಸಿದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದೇನೆ ಎನ್ನುವ ಕಾರಣಕ್ಕೆ ನನ್ನನ್ನು ಸಂಯೋಜಕ ಹುದ್ದೆಯಿಂದ ವಿಮುಕ್ತಿ ಮಾಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಆದರೆ ಡಿಕೆಶಿ ವಿರುದ್ಧ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಡಿಕೆಶಿ ನಮ್ಮ ನಾಯಕರು ಮತ್ತು ನನ್ನ ಅತ್ಯಂತ ಆತ್ಮೀಯರಾಗಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ರಾಜ್ಯ ನಾಯಕರ ವಿರುದ್ಧ ಮಾತನಾಡಿದಲ್ಲಿ ಅದು ನನಗೆ ಹಿನ್ನಡೆ ತರುತ್ತದೆ ಎನ್ನುವ ಸಾಮಾನ್ಯ ಜ್ಞಾನ ನನ್ನಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.