LATEST NEWS
ಅಕ್ಕಿ ವಿತರಣೆ ನೆಪದಲ್ಲಿ ಸಾಮಾಜಿಕ ಅಂತರವನ್ನೇ ಮರೆತ ಜನಪ್ರತಿನಿಧಿಗಳು
ಅಕ್ಕಿ ವಿತರಣೆ ನೆಪದಲ್ಲಿ ಸಾಮಾಜಿಕ ಅಂತರವನ್ನೇ ಮರೆತ ಜನಪ್ರತಿನಿಧಿಗಳು
ಮಂಗಳೂರು ಎಪ್ರಿಲ್ 4: ಕೊರೊನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಿಲ್ಲಾಡಳಿತ ಒಂದೆಡೆ ಕರೆ ನೀಡುತ್ತಿದ್ದರೆ ಇನ್ನೊಂದೆಡೆ ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಂತೆ ಜನತೆಯನ್ನು ಒಟ್ಟುಗೂಡಿಸುತ್ತಿರುವ ವಿದ್ಯಾಮಾನ ಆತಂಕಕಾರಿಯಾಗಿದೆ.
ಇಂದು ಬೆಳಿಗ್ಗೆ ಕಂಕನಾಡಿ ಕರಾವಳಿ ಆಟೋ ರಿಕ್ಷಾ ಪಾರ್ಕ್ ಬಳಿ ಜನತೆಯನ್ನು ಒಟ್ಟು ಸೇರಿಸಿ ಎಂಎಲ್‌ಸಿ ಐವನ್ ಡಿ ಸೋಜಾ ನೇತೃತ್ವದಲ್ಲಿ ಅಕ್ಕಿ ವಿತರಣೆ ಮಾಡಲಾಗಿದ್ದು, ನೂರಾರು ಮಂದಿ ಇಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಅಕ್ಕಿ ಪಡೆಯುತ್ತಿರುವುದು ಕಂಡು ಬಂದಿದೆ.
ಐವನ್ ಡಿ ಸೋಜಾ ಅವರ ನೇತೃತ್ವದಲ್ಲಿ ಅಕ್ಕಿ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಇಲ್ಲಿ ಬಡವರು, ಕೂಲಿ ಕಾರ್ಮಿಕರು, ಮಧ್ಯಮವರ್ಗದ ಜನರು ಸೇರಿದ್ದರು. ಎಲ್ಲರೂ ಮಾಸ್ಕ್ ಧರಿಸಿದ್ದರೇ ಹೊರತು ಯಾರೂ ಕೂಡಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಂತೆ ಕಾಣಲಿಲ್ಲ.
ಇನ್ನು ಅಲ್ಲಿಗೆ ಬಂದ ಐವನ್ ಡಿ ಸೋಜಾ ಅವರು ಕೂಡಾ ಜನರಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿರುವುದು ಕಂಡು ಬಂದರೂ, ಎಲ್ಲಿ ತಮಗೆ ಅಕ್ಕಿ ಸಿಗುವುದಿಲ್ಲವೂ ಎಂದು ಜನರು ಗುಂಪುಗೂಡುತ್ತಿರುವ ದೃಶ್ಯ ಕಂಡು ಬಂತು.
ಶಾಸಕ ಯು ಟಿ ಖಾದರ್, ಮಾಜಿ ಶಾಸಕ ಜೆ ಆರ್ ಲೋಬೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಿಲ್ಲಾಡಳಿತ ನೀಡಿದ ಆದೇಶವನ್ನೇ ಜನಪ್ರತಿನಿಧಿಗಳು ಇಲ್ಲಿ ಅಣಕವಾಡಿದಂತಿತ್ತು.