DAKSHINA KANNADA
ರಾಜ್ಯದಲ್ಲಿ ಶಾಲೆಗಳ ಪುನರಾರಂಭದ ಕುರಿತು ಸರಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ…

ಸುಬ್ರಹ್ಮಣ್ಯ ಜುಲೈ 11: ರಾಜ್ಯದಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಬಗ್ಗೆ ರಾಜ್ಯ ಸರಕಾರ ಈವರೆಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳ ಪುನರ್ ಆರಂಭದ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಅವರು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಜುಲೈ 13 ರಿಂದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆರಂಭಗೊಳ್ಳಲಿದ್ದು, 30 ತಾರೀಖಿನ ಒಳಗೆ ಈ ಪ್ರಕ್ರಿಯೆಯನ್ನು ಮುಗಿಸುವ ನಿರೀಕ್ಷೆಯಿದೆ ಎಂದರು.ಯಾವ ರೀತಿ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೋ ಅದೇ ರೀತಿಯ ಸುರಕ್ಷತೆಯನ್ನು ಮೌಲ್ಯಮಾಪನಾ ಕೇಂದ್ರಗಳಲ್ಲೂ ಕೈಗೊಳ್ಳಲಾಗುವುದು.ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 18 ಒಳಗೆ ಬರುವ ಸಾಧ್ಯತೆಯಿದ್ದು, ಈ ಕುರಿತೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆನ್ ಲೈನ್ ಶಿಕ್ಷಣಕ್ಕಾಗಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಲ್ಯಾಪ್ ಟಾಪ್ ಖರೀದಿಸುವಂತೆ ಒತ್ತಡ ಹೇರುತ್ತಿರುವ ದೂರುಗಳು ಬಂದಿದ್ದು, ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಜುಲೈ 14 ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚೆ ನಡೆಸುದಾಗಿಯೂ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಗ್ರಾಮೀಣ ಭಾಗದಲ್ಲಿ ಕಷ್ಟಸಾಧ್ಯವಾಗಿದ್ದು, ದೂರದರ್ಶನ ಶಿಕ್ಷಣದ ಮೂಲಕ ಶಿಕ್ಷಣ ನೀಡುವ ಯೋಜನೆಯೂ ಸರಕಾರದ ಮುಂದಿದೆ ಎಂದರು.