BANTWAL
ಅಧಿಕಾರಿಗಳಿಗೂ ಮೆತ್ತಿದೆಯೇ ಗಣಿ ಧೂಳು, ಕಾಣುತ್ತಿಲ್ಲವೇ ಜನರ ಗೋಳು
ಅಧಿಕಾರಿಗಳಿಗೂ ಮೆತ್ತಿದೆಯೇ ಗಣಿ ಧೂಳು, ಕಾಣುತ್ತಿಲ್ಲವೇ ಜನರ ಗೋಳು
ಬಂಟ್ವಾಳ, ಅಕ್ಟೋಬರ್ 4: ತನ್ನ ಮನೆಯ ಹಿತ್ತಲಿನಿಂದ ಮರಕಡಿದಾಗ, ತನ್ನ ಅಗತ್ಯಕ್ಕಾಗಿ ನದಿ ಬದಿಯಿಂದ ಒಂದು ಚೀಲ ಮರಳು ತೆಗೆದಾಗ, ಅಕ್ರಮ ನಡೆಯುತ್ತಿದೆ ಎಂದು ಧಾಳಿ ನಡೆಸಿ ಫೋಟೋಗಳಿಗೆ ಫೋಸ್ ನೀಡುವ ಅಧಿಕಾರಿಗಳನ್ನು ಇಂದು ಭೂತಕನ್ನಡಿ ಹಿಡಿದು ಹುಡುಕುವ ಸ್ಥಿತಿ ನಿರ್ಮಾಣಗೊಂಡಿದೆ. ಹೌದು ಕಳೆದ ನಾಲ್ಕು ವರ್ಷಗಳಿಂದ ಬಂಟ್ವಾಳ ತಾಲೂಕಿನ ಅಮ್ಟಾಡಿಯಲ್ಲಿ ನಡೆಯುತ್ತಿರುವ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆಯನ್ನು ಈ ಅಧಿಕಾರಿಗಳು ಯಾವಾಗ ನಿಲ್ಲಿಸುತ್ತಾರೆ ಎನ್ನುವುದಕ್ಕಾಗಿ ಈ ಊರಿನ ಜನ ಕಾಯುತ್ತಿದ್ದಾರೆ. ಜನನಿಬಿಢ ಪ್ರದೇಶದ ಬಳಿಯಲ್ಲೇ ನಡೆಯುತ್ತಿರುವ ಈ ಕಲ್ಲುಗಣಿಗಾರಿಕೆಯ ಕುರಿತು ಮ್ಯಾಂಗಲೂರು ಮಿರರ್ ವಿಸೃತ ವರದಿಯನ್ನೂ ಪ್ರಕಟಿಸಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಮಂಗಳೂರು ಸಹಾಯಕ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಯಿಂದ ಹಾನಿಗೊಳಗಾದ ಕೆಲವು ಮನೆಗಳನ್ನು ವೀಕ್ಷಿಸಿ ನಾಟಕ ಮಾಡಿ ಹೋದ ತಕ್ಷಣವೇ ಗಣಿಗಾರಿಕೆ ಮತ್ತೆ ಎಂದಿನಂತೆ ಆರಂಭಗೊಂಡಿದೆ. ತಾನು ಮಾಡಿದ್ದೇ ಕಾನೂನು ಎನ್ನುವ ಈ ಗಣಿ ಧನಿಯ ಮೇಲೆ ನಿಯಂತ್ರಣ ಹೇರುವವರೇ ಇಲ್ಲದಂತಾಗಿದೆ.ಅಮ್ಟಾಡಿ ಎನ್ನುವ ಕುಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಈ ಊರಿನ ಜನರನ್ನು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದೆ. ಅಕ್ರಮವಾಗಿ ಸ್ಪೋಟಕಗಳನ್ನು ಸಿಡಿಸುವುದರಿಂದಾಗಿ ತಮ್ಮ ಮನೆಗಳು ಯಾವಾಗ ಧರೆಗುರುಳಲಿವೆ ಎನ್ನುವ ಆತಂಕದಲ್ಲಿ ಈ ಊರಿನ ಜನರಿದ್ದಾರೆ. ಈ ನಡುವೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಯಿಂದ ತೊಂದರೆಗೊಳಗಾದ ಕೆಲವು ಮನೆಗಳನ್ನು ಪರಿಶೀಲಿಸಿದ ಸಹಾಯಕ ಕಮಿಷನರ್ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಹಾಗೂ ವಸತಿ ಪ್ರದೇಶಗಳ ನಡುವೆ ಇರುವ ದೂರದ ಕುರಿತು ಸರ್ವೆ ನಡೆಸುವ ಆದೇಶ ಹೊರಡಿಸಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅದನ್ನು ನಿಲ್ಲಿಸುವ ಪ್ರಯತ್ನವನ್ನೇ ಈ ಅಧಿಕಾರಿ ಮಾಡಿಲ್ಲ. 2013 ಕ್ಕೇ ಈ ಗಣಿಗಾರಿಕೆಯ ಪರವಾನಗಿ ಮುಗಿದಿದ್ದರೂ, ಪರವಾನಗಿ ಇಲ್ಲದೆ ನಡೆಸುತ್ತಿರುವ ಈ ಅಕ್ರಮವನ್ನು ನಿಲ್ಲಿಸಲು ಅಧಿಕಾರಿಯು ಹಿಂದೇಟು ಹಾಕುತ್ತಿರುವ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಈ ಹಿಂದೆಯೇ ದೊರೆತ ಸೂಚನೆಯಂತೆ ಗಣಿಗಾರಿಕೆಯು ನಿಲ್ಲುತ್ತಿದ್ದು, ಅಧಿಕಾರಿಗಳು ಹೊರ ನಡೆದಂತೆ ಮತ್ತೆ ಸ್ಪೋಟಕಗಳು ಎಂದಿನಂತೆ ಸಿಡಿಯುತ್ತಿದೆ. ಈ ಕುರಿತು ಸಹಾಯಕ ಅಧಿಕಾರಿಗೆ ಮೊಬೈಲ್ ಕರೆ ಮಾಡಿದರೂ, ಕರೆಯನ್ನು ಸ್ವೀಕರಿಸುವ ಸೌಜನ್ಯವನ್ನೂ ಈ ಅಧಿಕಾರಿಯು ತೋರಿಸದಿರುವುದು ಗಣಿಧನಿಯ ಧೂಳು ಇವರಿಗೂ ಮೆತ್ತಿದೆಯೋ ಎನ್ನುವ ಸಂಶಯ ಮೂಡುತ್ತಿದೆ. ಕಳೆದ 4 ವರ್ಷಗಳಿಂದ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದಾಗಿ ಹೇಳಿಕೊಂಡು ಬರುತ್ತಿರುವ ರಾಜ್ಯ ಸರಕಾರದ ಮೂಗಿನಡಿಯಲ್ಲೇ ಕೋಟಿಗಟ್ಟಲೆ ರಾಜಸ್ವ ಲೂಟಿಯಾಗುತ್ತಿದ್ದರೂ, ಈ ಬಗ್ಗೆ ಯಾರೂ ಸೊಲ್ಲೆತ್ತದಿರುವುದು ಅಕ್ರಮದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆಯೇ ಎನ್ನುವುದನ್ನು ಸೂಚಿಸುತ್ತಿದೆ.