LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ನಿಫಾ ವೈರಸ್ ಪ್ರಕರಣ ಇಲ್ಲ – ಜಿಲ್ಲಾಧಿಕಾರಿ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ನಿಫಾ ವೈರಸ್ ಪ್ರಕರಣ ಇಲ್ಲ – ಜಿಲ್ಲಾಧಿಕಾರಿ
ಮಂಗಳೂರು ಮೇ 24: ಮಂಗಳೂರಿನಲ್ಲಿ ನಿಫಾ ಸೊಂಕಿನ ಶಂಕಿತ ರೋಗಿಗಳ ರಕ್ತ ಹಾಗೂ ಕಫ ಮಾದರಿ ಪರೀಕ್ಷೆ ಪೂರ್ಣಗೊಂಡಿದ್ದು, ರೋಗಿಗಳಲ್ಲಿ ಯಾವುದೇ ನಿಫಾ ಸೊಂಕು ಪತ್ತೆಯಾಗಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯ ಜನರಲ್ಲಿ ಮೂಡಿದ ಆತಂಕ ದೂರವಾದಂತಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳದಲ್ಲಿ ಆತಂಕ ಸೃಷ್ಠಿಸಿರುವ ನಿಫಾ ವೈರಸ್ ಶಂಕೆಯಲ್ಲಿ ಜಿಲ್ಲೆಗೆ ಚಿಕಿತ್ಸೆಗಾಗಿ ಬಂದಿದ್ದ ಇಬ್ಬರ ಕಫ ಮತ್ತು ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅದರ ವರದಿ ಬಂದಿದ್ದು ವರದಿ ನೆಗೆಟಿವ್ ಆಗಿದೆ ಎಂದು ತಿಳಿಸಿದರು.
ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ನಿಫಾ ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಾರ್ವಜನಿಕರು ಈ ರೋಗದ ಬಗ್ಗೆ ಯಾವುದೇ ಆತಂಕ , ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಮಂಗಳೂರಿಗೆ ಚಿಕಿತ್ಸೆಗೆ ಬಂದಿದ್ದ ಇಬ್ಬರು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದ ಕಾರಣ ಅನುಮಾನದ ಮೇರೆಗೆ ನಿಫಾ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದರು.
ನಿಫಾ ವೈರಸ್ ಎಚ್ 1 ಎನ್ 1 ನಂತೆ ಗಾಳಿಯಲ್ಲಿ ಹರಡುವುದಿಲ್ಲ, ಬಾವಿಯ ನೀರಿನಿಂದಲೂ ಹರಡುವುದಿಲ್ಲ ಆದರೂ ಎಲ್ಲಾ ಆಸ್ಪತ್ರೆಗಳಿಗೂ ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಬಾವಲಿಯಂತ ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಿದ ಅವರು ಜತೆಗೆ ಈ ಸೊಂಕು ಹಂದಿಯಂತಹ ಪ್ರಾಣಿಗಳಿಂದಲೂ ಹರಡುವುದರಿಂದ , ಪ್ರಾಣಿಗಳ ಜೊತೆ ಇದ್ದು ಕೆಲಸ ಮಾಡುವವರು ಸ್ವಚ್ಚತೆ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.