LATEST NEWS
ಪಾವೂರು ಕುದ್ರುವಿನಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ನಡೆದಿಲ್ಲ : ಗಣಿ ಇಲಾಖೆ ಸ್ಪಷ್ಟನೆ
ಮಂಗಳೂರು ಜೂನ್ 26:- ಉಳ್ಳಾಲ ತಾಲ್ಲೂಕು ಪಾವೂರು ಕುದ್ರು ಎಂಬಲ್ಲಿ ಜೂನ್ 21 ರಂದು ಅನಧಿಕೃತವಾಗಿ ಸಾಮಾನ್ಯ ಮರಳನ್ನು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಭಿತ್ತರವಾದ ಸುದ್ದಿಯ ಹಿನ್ನೆಲೆಯಲ್ಲಿ ಕಚೇರಿಯ ಹಿರಿಯ ಭೂವಿಜ್ಞಾನಿಯವರೊನ್ನೊಳಗೊಂಡ ತಾಂತ್ರಿಕ ಅಧಿಕಾರಿಗಳ ತಂಡವು ಜೂನ್ 24 ರಂದು ಸದರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಈ ಕುದ್ರುವಿನ ಪೂರ್ವಕ್ಕೆ ಸಾವಯವ ಮಣ್ಣು ಮಿಶ್ರಿತ ಮರಳು ಜರುಗಿದ್ದು, ಉಳಿದಂತೆ ಕುದ್ರು ಅಖಂಡವಾಗಿರುವುದು ಕಂಡುಬಂದಿದ್ದು, ಕುದ್ರುವಿನ ಪೂರ್ವಕ್ಕೆ ಇರುವ ಅರುಗು ಜರುಗಲು ಕಾರಣವೇನೆಂದರೆ ಗಿಡ ಮರಗಳ ಅಭಾವ ಅಂದರೆ ಸದರಿ ಪ್ರದೇಶದಲ್ಲಿ ಅರುಗನ್ನು ಹಿಡಿದಿಟ್ಟುಕೊಳ್ಳಲು ಪೂರಕವಾದ ಬೇರು ಬಿಡುವ ಮತ್ತು ಅರುಗನ್ನು ಸಂರಕ್ಷಿಸುವ ಕಾಂಡ್ಲ ಗಿಡಗಳು ಇಲ್ಲದಿರುವುದು ಹಾಗೂ ಬಿರುಸಾದ ನೀರಿನ ಹರಿವಿನಿಂದ ಆಗಿರುತ್ತದೆ ಮತ್ತು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ಅನಧಿಕೃತ ಸಾಮಾನ್ಯ ಮರಳು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿರುವುದಿಲ್ಲ.
ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಮರಳು ತೆಗೆಯುವ ದೃಶ್ಯಗಳು ಹಳೆಯಾದಾಗಿದ್ದು ಮತ್ತು ಸದರಿ ದ್ವೀಪದ ಬಳಿ ಈಚೆಗೆ ಯಾವುದೇ ಮರಳು ತೆಗೆದಿಲ್ಲದೇ ಇರುವುದು ಪ್ರದೇಶದಲ್ಲಿರುವ ಒಣಗಿದ ಮತ್ತು ಸರಿದಿರುವ ಸಾವಯವ ಮಣ್ಣು ಮಿಶ್ರಿತ ಮಣ್ಣಿನ ಮೇಲೆ ಬೆಳೆದಿರುವ ಮಜ್ಜಿಗೆ ಹುಲ್ಲಿನಿಂದ ಖಾತ್ರಿಯಾಗಿರುತ್ತದೆ. ಕಂದಾಯ ಇಲಾಖೆಯ ದಾಖಲೆಯಂತೆ ಸದರಿ ಕುದ್ರುವಿನ ಒಟ್ಟು ವಿಸ್ತೀರ್ಣವು 30.49 ಎಕರೆ ಆಗಿದ್ದು, ಭೌತಿಕವಾಗಿ ಪರಿಶೀಲಿಸಿದಾಗ ಸದರಿ ಕುದ್ರುವಿನ ವಿಸ್ತೀರ್ಣವು 98.02 ಎಕರೆ ಇದ್ದು, ಕುದ್ರುವಿನ ಯಾವುದೇ ಭಾಗವು ನದಿಯಲ್ಲಿ ಮುಳುಗಡೆಗೊಂಡಿರುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.