LATEST NEWS
ದುಂದು ವೆಚ್ಚದ ಬಕ್ರೀದ್ ಹಬ್ಬ ಬೇಡ ಪ್ರವಾಹ ಪೀಡಿತರಿಗೆ ನೇರವಾಗಿ – ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ
ದುಂದು ವೆಚ್ಚದ ಬಕ್ರೀದ್ ಹಬ್ಬ ಬೇಡ ಪ್ರವಾಹ ಪೀಡಿತರಿಗೆ ನೇರವಾಗಿ – ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ
ಮಂಗಳೂರು ಅಗಸ್ಟ್ 18: ಮಹಾಮಳೆಗೆ ಮತ್ತು ಪ್ರವಾಹದಿಂದ ತತ್ತರಿಸಿರುವ ಕೇರಳ ಮತ್ತು ಕೊಡಗು ಜಿಲ್ಲೆಯ ಜನರಿಗೆ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಗರಿಷ್ಠ ನೆರವು ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಕರೆ ನೀಡಿದ್ದಾರೆ.
ಕೇರಳದಲ್ಲಿ ಸುರಿದ ಭೀಕರ ಮಳೆಗೆ ಉಂಟಾದ ಪ್ರವಾಹಕ್ಕೆ ಸಂಪೂರ್ಣ ಕೇರಳ ರಾಜ್ಯ ಮುಳುಗಿ ಹೋಗಿದ್ದು, ಜನರ ಪರಿಸ್ಥಿತಿ ಹೇಳತೀರದಾಗಿದೆಯ. ರಾಜ್ಯದ ಹೆಚ್ಚಿನ ಎಲ್ಲಾ ಜಿಲ್ಲೆಗಳು ಪ್ರವಾಹ ಪೀಡಿತರಾಗಿದ್ದು ಲಕ್ಷಾಂತರ ಜನರು ಸಂಕಷ್ಟಕೀಡಾಗಿದ್ದಾರೆ. ಅಲ್ಲದೆ ನೂರಾರು ಜನರು ತನ್ನ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಜನರು ಮನೆ ಇಲ್ಲದೆ ನಿರಾಶ್ರಿತರಾಗಿದ್ದಾರೆ.
ಮೊದಲೇ ಬಡತನ ಎದುರಿಸುತ್ತಿರುವ ಜನರು ಇಂತಹ ಸಂದರ್ಭದಲ್ಲಿ ಕಂಗಾಲಾಗಿ ಬಿಟ್ಟಿರುತ್ತಾರೆ. ಪ್ರಾಣಭಯದ ಜೊತೆ ಊಟ, ತಿಂಡಿ ಜೊತೆ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ಅಲ್ಲಿದೆ. ಅದರ ಜೊತೆಗೆ ನಮ್ಮ ರಾಜ್ಯದ ಕೊಡಗು ಜಿಲ್ಲೆ ಕೂಡ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಜೋಡುಪಾಲದಲ್ಲೂ ಪ್ರವಾಹದಿಂದ ಭಾರೀ ಅನಾಹುತವಾಗಿ ಜೀವ ಹಾನಿಯಾಗಿದೆ. ಈ ಚಿಂತಾಜನಕ ಪರಿಸ್ಥಿತಿಗೆ ಪ್ರತಿಯೊಬ್ಬ ಮನುಷ್ಯ ಹೃದಯ ಸ್ಪಂದಿಸುವುದು ಅತ್ಯಗತ್ಯ ಎಂದು ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಹೇಳಿದ್ದಾರೆ.
ಪ್ರವಾಹ ಪೀಡಿತ ಜನರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಗರಿಷ್ಟ ನೆರವು ನೀಡಲು ಮುಂದಾಗಬೇಕು. ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಸಂದರ್ಭದಲ್ಲಿ ಹಬ್ಬದ ಹೆಸರಲ್ಲಿ ದುಂದು ವೆಚ್ಚ ಮಾಡದೆ ಸಾಧ್ಯವಾದಷ್ಟು ಹಣವನ್ನು ಪ್ರವಾಹ ಪೀಡಿತರಿಗೆ ತಲುಪಿಸುವ ಸರಕಾರಿ ಇಲಾಖೆಗಳಿಗೆ ಅಥವಾ ಸೂಕ್ತ ಸಂಸ್ಥೆಗಳಿಗೆ ನೀಡಬೇಕು. ಇದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ ಎಂದು ಖಾಝಿ ಅವರು ಹೇಳಿದ್ದಾರೆ.