DAKSHINA KANNADA
ಮಳೆ ಬಂದರೆ ದ್ವೀಪ, ಇದು ಶೆಟ್ಟಿಕಜೆಯ ಶಾಪ

ಮಳೆ ಬಂದರೆ ದ್ವೀಪ, ಇದು ಶೆಟ್ಟಿಕಜೆಯ ಶಾಪ
ಸುಳ್ಯ,ಸೆಪ್ಟಂಬರ್ 19: ಈ ಊರು ಮಳೆಗಾಲದಲ್ಲಿ ಅಕ್ಷರಶ ದ್ವೀಪವಾಗುತ್ತೆ, ಮಳೆಗಾಲದಲ್ಲಿ ಈ ಊರಿನ ಜನರಿಗೆ ಅನಾರೋಗ್ಯ ಕಾಡಿದಲ್ಲಿ ಸಾವೊಂದೇ ಅವರಿಗಿರುವ ಮೊದಲ ಹಾಗೂ ಕೊನೆಯ ಆಯ್ಕೆ. ತನ್ನ ಅವಶ್ಯಕತೆಗಳಿಗಾಗಿ ಪೇಟೆಯನ್ನು ಸಂಪರ್ಕಿಸಬೇಕಾದಲ್ಲಿ ಬಿದಿರಿನಿಂದ ನಿರ್ಮಿಸಿದ ಪಾಪೊಂದೇ ಇವರಿಗೆ ಸೇತುವೆ. ಹೌದು ಕಳೆದ 60 ವರ್ಷಗಳಿಂದ ಈ ಊರಿನ ಜನರ ಪ್ರಮುಖ ಬೇಡಿಕೆಯಾದ ಸೇತುವೆ ಇಂದಿಗೂ ಈ ಊರನ್ನು ಸಂಪರ್ಕಿಸಿಲ್ಲ. ಇದೀಗ ಜನಪ್ರತಿನಿಧಿಗಳು ಪ್ರತಿಯೊಂದು ಯೋಜನೆಗೂ ಕೋಟಿ-ಕೋಟಿ ಕೊಡುತ್ತೇನೆಂದು ಹೇಳಿಕೆ ನೀಡುತ್ತಿರುವುದನ್ನು ನೋಡುತ್ತಿರುವ ಈ ಗ್ರಾಮದ ಮಂದಿ ತಮ್ಮ ಸೇತುವೆಗೂ ಏನಾದರೂ ಕೊಡುತ್ತಾರೆಯೋ ಎನ್ನುವ ನಿರೀಕ್ಷೆಯಲ್ಲಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಹೆಚ್ಚು ಕುಗ್ರಾಮಗಳನ್ನೇ ಹೊಂದಿರುವ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎನ್ನುವ ಕುಗ್ರಾಮದ ಕಥೆ ಹಾಗೂ ವ್ಯಥೆ. ಕಳೆದ 60 ವರ್ಷಗಳಿಂದೀಚೆಗೆ ಈ ಊರಿನ ಜನರಿಗೆ ಮಳೆಗಾಲ ಬಂತೆಂತರೆ ಒಂದು ರೀತಿಯ ನಡುಕ. ಹೌದು ಇದಕ್ಕೆ ಕಾರಣವೂ ಇದೆ.

ಈ ಊರಿನ ಜನ ಇತರೆ ಊರುಗಳನ್ನು ಸಂಪರ್ಕಿಸಬೇಕಾದಲ್ಲಿ ಇಲ್ಲಿ ಹರಿಯುವ ಶೆಟ್ಟಿ ಹಳ್ಳವನ್ನು ದಾಟಿಯೇ ಹೋಗಬೇಕು. ಬೇಸಿಗೆ ಕಾಲದಲ್ಲಿ ಈ ಹಳ್ಳದಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತದೆ. ಇದರಿಂದಾಗಿ ಈ ಭಾಗದ ಜನ ಹಳ್ಳದಲ್ಲೇ ಇಳಿದು ತನ್ನ ಅವಶ್ಯಕತೆಗಳಿಗಾಗಿ ಬೇರೆ ಊರುಗಳಿಗೆ ಪಯಣಸುತ್ತಾರೆ.
ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹಳ್ಳವನ್ನು ದಾಟುವುದು ಬಿಡಿ, ಅದರ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಆದರೂ ಅತೀ ಅವಶ್ಯಕತೆ ಬಂದಾಗ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಪ್ರತಿವರ್ಷವೂ ಇಲ್ಲಿನ ಜನ ಈ ಹಳ್ಳಕ್ಕೆ ಬಿದಿರಿನ ಪಾಪೊಂದನ್ನು ನಿರ್ಮಿಸುತ್ತಾರೆ. ಮಳೆ ನಿಂತಾಗ ಮಾತ್ರ ಈ ಪಾಪು ವನ್ನು ಬಳಕೆ ಮಾಡಬಹುದಾಗಿದ್ದು, ಮಳೆ ಬರುತ್ತಿರುವ ಸಂದರ್ಭದಲ್ಲಿ ಇದನ್ನು ಬಳಸಿದ್ದೇ ಆದಲ್ಲಿ ಪಾಪು ನ ಜೊತೆಗೆ ಅದರಲ್ಲಿ ಸಾಗುವವರೂ ಹಳ್ಳದ ನೀರಿಗೆ ಹೋಗಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ಪ್ರತಿ ಬಾರಿ ಚುನಾವಣೆ ಬಂದಾಗ ಚುನಾವಣೆ ಕಳೆದ ಬಳಿಕವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ ಜನ ಮತ್ತೆ ಈ ಕಡೆ ತಲೆ ಎತ್ತಿ ನೋಡುವುದು ಮುಂದಿನ ಚುನಾವಣೆಯಲ್ಲಿ ಎನ್ನುವುದು ಈ ಹಳ್ಳಿಯ ಹಿರಿಯರಾದ ವೆಂಕಪ್ಪ ಮಲೆಕುಡಿಯರ ಹತಾಶೆಯ ನುಡಿ.ಶೆಟ್ಟಿಕಜೆಯ ಜನ ತನ್ನ ಅವಶ್ಯಕತೆಗಾಗಿ ಕಲ್ಮಕಾರು, ಅಂಜನಕಜೆ, ಕೊಪ್ಪದ, ಗುಳಿಕಾನ,ಗುಡ್ಡೆ ಕಾನ, ಪೆರ್ಮುಕಜೆ ಹೀಗೆ ಹಲವು ಗ್ರಾಮಗಳನ್ನು ಸಂಪರ್ಕಿಸಲು ಇಲ್ಲಿ ಸೇತುವೆಯ ಅನಿವಾರ್ಯತೆಯಿದೆ.
ಶೆಟ್ಟಿಕಜೆಯಲ್ಲಿ ಸುಮಾರು 100 ಕ್ಕೂ ಮಿಕ್ಕಿದ ಕುಟುಂಬಗಳು ವಾಸಿಸುತ್ತಿದ್ದು, ಇದರಲ್ಲಿ ಶೇಕಡಾ 50 ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೇ ಸೇರಿದ ಕುಟುಂಬಗಳಿವೆ.
ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಆ ಯೋಜನೆಗೆ, ಈ ಯೋಜನೆಗೆ ಕೋಟಿ-ಕೋಟಿ ಹಣ ಬಿಡುಗಡೆ ಮಾಡುತ್ತಿರುವಾಗ, ಈ ಊರಿನ ಜನ ತಮ್ಮ ಸೇತುವೆಗೂ ಹಣ ಬಿಡುಗಡೆಯಾಗುತ್ತದೆಯೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎನ್ನುತ್ತಾರೆ ಕಲ್ಮಕಾರು ನಿವಾಸಿಯಾದ ಸತೀಶ್ ಕೊಂಬೆಮನೆ.
ಬೇಕಾದದಕ್ಕೂ, ಬೇಡದಕ್ಕೂ ಕೋಟಿ-ಕೋಟಿ ರೂಪಾಯಿಗಳನ್ನು ವ್ಯಯಿಸುವ ಸರಕಾರಗಳು ಶೆಟ್ಟಿಕಜೆ ಗ್ರಾಮದ ಜನರ ಸಮಸ್ಯೆಗಳತ್ತ ಕಣ್ಣು ಹಾಯಿಸಬೇಕಿದೆ. ಸೇತುವೆಯೊಂದನ್ನು ಬಿಟ್ಟು ಬೇರೇನೂ ಬೇಡದ ಈ ಮುಗ್ಧ ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.