DAKSHINA KANNADA
ನೇತ್ರಾವತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ, ಅಧಿಕಾರಿಗಳೇ ಯಾಕಿಲ್ಲ ಕ್ರಮ ?
ನೇತ್ರಾವತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ, ಅಧಿಕಾರಿಗಳೇ ಯಾಕಿಲ್ಲ ಕ್ರಮ ?
ಹಣ, ಅಧಿಕಾರದಿಂದ ಯಾವುದೇ ಕಾನೂನನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಸಾಮರ್ಥ್ಯವಿರುವ ಜನ ನಮ್ಮ ಸಮಾಜದಲ್ಲಿದ್ದಾರೆ. ಇಂಥಹುದೇ ಒರ್ವ ವ್ಯಕ್ತಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿದ್ದಾರೆ. ಉಪ್ಪಿನಂಗಡಿ ಸಮೀಪ ಹರಿಯುತ್ತಿರುವ ನೇತ್ರಾವತಿ ನದಿಗೇ ಪಿಲ್ಲರ್ ಗಳನ್ನು ಹಾಕಿ ಅಕ್ರಮ ಕಟ್ಟಡ ನಿರ್ಮಿಸಿದರೂ ಈತನನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ. ಈ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆದರೆ, ಪರಿಶೀಲಿಸುತ್ತೇವೆ ಎನ್ನುವ ಸಿದ್ದ ಉತ್ತರ ದೊರಕಿದರೆ, ಸ್ಥಳೀಯ ಮಟ್ಟದ ಅಧಿಕಾರಿಗಳ ನೋಟೀಸ್ ನೀಡಲಾಗಿದೆ ಎನ್ನುವ ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪ ಹರಿಯುತ್ತಿರುವ ನೇತ್ರಾವತಿ ನದಿಯ ಗಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಿಶಾಲವಾಗಿ ಹರಿಯುತ್ತಿದ್ದ ಈ ನದಿ ಹಲವು ಒತ್ತುವರಿಗಳಿಂದಾಗಿ ಇದೀಗ ತೊರೆಯ ಗ್ರಾತ್ರದಲ್ಲಿ ಹರಿಯುವಂತಹ ಸ್ಥಿತಿಯಲ್ಲಿದೆ. ಇಂಥಹುದೇ ಒಂದು ಅಕ್ರಮ ಉಪ್ಪಿನಂಗಡಿಯ ಕುಟೇಲು ಸೇತುವೆಯ ಪಕ್ಕದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ನದಿಯ ನೀರಿನ ಮೇಲೆಯೇ ಪಿಲ್ಲರ್ ಗಳನ್ನು ಹಾಕಿ ಅಕ್ರಮ ಕಟ್ಟಡವನ್ನು ಕಟ್ಟಿರುವ ಕಟ್ಟಡದ ಮಾಲಕ ಈ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರ ಕೈಯಿಂದ ಉದ್ಘಾಟಿಸುವ ಮೂಲಕ ತನ್ನ ತಂಟೆಗೆ ಬರದಂತೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ವಸತಿಗೃಹ, ಹೋಟೆಲ್, ಸೂಪರ್ ಬಜಾರ್ ಹೀಗೆ ಹಲವು ಶೋಪ್ ಗಳನ್ನು ಈ ಕಟ್ಟಡದಲ್ಲಿ ನಡೆಸುತ್ತಿರುವ ಕಟ್ಟಡ ಮಾಲಕ ಅಕ್ರಮವಾಗಿ ಕಟ್ಟಡ ಕಟ್ಟಿರುತ್ತಾರೆ ಎನ್ನುವ ವಿಚಾರ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ಗೆ ತಿಳಿದಿದ್ದರೂ ಮೂಕಪ್ರೇಕ್ಷಕನಾಗಿ ಕುಳಿತಿದೆ. ಈ ಸಂಬಂಧ ಪ್ರತಿಕ್ರಿಯಿಸಿದ್ದ ಉಪ್ಪಿನಂಗಡಿ ಗ್ರಾಮಪಂಚಾಯತ್ ಪಿಡಿಓ ಕಟ್ಟಡ ಮಾಲಕನಿಗೆ ನೋಟೀಸ್ ಜಾರಿ ಮಾಡಲಾಗಿದೆ ಎನ್ನುವ ಉತ್ತರ ನೀಡುತ್ತಿದ್ದರೂ, ತಿಂಗಳುಗಳು ಕಳೆದರೂ ಗ್ರಾಮಪಂಚಾಯತ್ ನಿಂದ ಎರಡು ಹೆಜ್ಜೆ ದೂರದಲ್ಲಿರುವ ಕಟ್ಟಡ ಮಾಲಿಕನಿಗೆ ಇಷ್ಟರವರೆಗೂ ನೋಟೀಸ್ ತಲುಪದಿರುವುದು ಆಶ್ಚರ್ಯಕ್ಕೂ ಕಾರಣವಾಗುವ ಸಂಗತಿಯಾಗಿದೆ. ಪುತ್ತೂರು ಸಹಾಯಕ ಆಯುಕ್ತರನ್ನು ಈ ಬಗ್ಗೆ ಪ್ರಶ್ನಿಸಿದಾಗ ಪರಿಶೀಲನೆ ನಡೆಸಲಾಗುವುದು ಎನ್ನುವ ಉತ್ತರವೊಂದನ್ನು ಬಿಟ್ಟರೆ ಬೇರೆ ಮಾತು ಬಂದಿಲ್ಲ. ಅಕ್ರಮ ಕಣ್ಣಿಗೆ ಕುಕ್ಕುವಂತಿದ್ದರೂ ಅಧಿಕಾರಿ ವರ್ಗ ಮಾತ್ರ ಯಾವುದೇ ಪರಿಶೀಲನೆಯನ್ನೂ, ನೋಟೀಸನ್ನೂ ಜಾರಿ ಮಾಡಿಲ್ಲ. ಈ ಮೂಲಕ ಕಟ್ಟಡ ಮಾಲಕನ ಅಕ್ರಮಕ್ಕೆ ತಮ್ಮ ಸಮ್ಮತಿಯನ್ನೂ ನೀಡಿದ್ದಾರೆ ಎನ್ನುವ ಆರೋಪ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿಯವರದ್ದಾಗಿದೆ. ವಿಪರ್ಯಾಸವೆಂದರೆ ಈ ಕಟ್ಟಡದ ಕುರಿತು ಮಾಧ್ಯಮಗಳು ವರದಿಗಳನ್ನು ಭಿತ್ತರಿಸಿದರೂ ಯಾವೊಬ್ಬ ಅಧಿಕಾರಿಯೂ ಕನಿಷ್ಟ ಪಕ್ಷ ಪರಿಶೀಲನೆ ನಡೆಸುವ ಕಾರ್ಯಕ್ಕೂ ಕೈ ಹಾಕಿಲ್ಲ. ಈ ಸಂಬಂಧ ಇದೀಗ ಮಲೆನಾಡು ಜನಹಿತರಕ್ಷಣಾ ವೇದಿಕೆ ಈ ಅಕ್ರಮದ ವಿರುದ್ಧ ಹೋರಾಟಕ್ಕೆ ಧುಮುಕಿದೆ. ಅಕ್ರಮ ಕಟ್ಟಡವನ್ನು ನೆಲಸಮ ಮಾಡದೇ ಹೋದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ವೇದಿಕೆ ಅಧಿಕಾರಿಗಳಿಗೆ ನೀಡಿದೆ. ಒಂದು ಕಡೆಯಲ್ಲಿ ಎತ್ತಿನಹಳ್ಳ ಯೋಜನೆಯ ಮೂಲಕ ನೇತ್ರಾವತಿ ನದಿಯನ್ನು ನುಂಗಿ ಹಾಕುವ ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆಗಳಲ್ಲಿ ಇಂಥಹ ಅಕ್ರಮಗಳನ್ನು ನಡೆಸುವ ಮೂಲಕವೂ ನದಿಯನ್ನು ನಾಶವಾಗುತ್ತಿದೆ. ಅನಕ್ಷರಸ್ಥ ಕೂಡಾ ಈ ಕಟ್ಟಡವು ನದಿಯಲ್ಲೇ ಕಟ್ಟಲಾಗಿದೆ ಎನ್ನುವಷ್ಟರ ಮಟ್ಟಿಗೆ ಸ್ಪಷ್ಟವಾಗಿದ್ದರೂ, ಕೆಲವು ಅಧಿಕಾರಿಗಳು ಇದು ಕಟ್ಟಡ ಮಾಲಕನ ಸ್ವಂತ ಜಮೀನು ಎಂದು ವಾದಿಸುವ ಕಾರ್ಯದಲ್ಲೂ ತೊಡಗಿರುವುದಕ್ಕೆ ಮಲೆನಾಡು ಜನಹಿತರಕ್ಷಣಾ ವೇದಿಕೆ ಆಕ್ಷೇಪವೆತ್ತಿದೆ. ವಾರದ ಒಳಗೆ ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಅಕ್ರಮ ಕಟ್ಟಡವನ್ನು ನೆಲಸಮ ಮಾಡದೇ ಹೋದಲ್ಲಿ ತೀವೃ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ವೇದಿಕೆಯದ್ದಾಗಿದೆ.