LATEST NEWS
ನಿಫಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ
ನಿಫಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ
ಉಡುಪಿ ಜೂನ್ 2 : ಕೋಳಿಯಿಂದ ನಿಫಾ ವೈರಸ್ ಹರಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡುತ್ತಿದ್ದು, ನಿಫಾ ವೈರಸ್ ಕೋಳಿಯಿಂದ ಹರಡುವುದಿಲ್ಲ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಹೇಳಿದ ಅವರು ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಮಣಿಪಾಲ ಸೆಂಟರ್ ನಲ್ಲಿ ನಿಫಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಫಾ ವೈರಸ್ ಕಾಣಸಿಕ್ಕಿಲ್ಲ ಎಂದು ದೃಢಪಡಿಸಿದರು.
ನಿಫಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವೇ ಇಲ್ಲ. ಕೇರಳದಲ್ಲಿ ಈಗಾಗಲೇ ವಿದೇಶಗಳಿಂದ ಔಷಧಿಗಳನ್ನು ತರಲಾಗಿದೆ ಎಂದು ತಿಳಿಸಿದರು.