LATEST NEWS
ನಿಫಾ ವೈರಸ್ ಭೀತಿ ಕುಸಿತ ಕಂಡ ಹಣ್ಣಿನ ವ್ಯಾಪಾರ
ನಿಫಾ ವೈರಸ್ ಭೀತಿ ಕುಸಿತ ಕಂಡ ಹಣ್ಣಿನ ವ್ಯಾಪಾರ
ಮಂಗಳೂರು ಮೇ 23: ಕೇರಳದಲ್ಲಿ 10 ಜನರ ಬಲಿ ತೆಗೆದುಕೊಂಡ ನಿಫಾ ವೈರಸ್ ಈಗ ಮಂಗಳೂರಿನಲ್ಲಿ ಹಣ್ಣು ವ್ಯಾಪಾರದ ಮೇಲೆ ನೇರ ಪರಿಣಾಮ ಬೀರಿದೆ. ಕೇರಳದಿಂದ ವೈರಸ್ ಹರಡುವ ಭೀತಿ ಈಗ ಹಣ್ಣು ವ್ಯಾಪಾರದ ಮೇಲೂ ಪ್ರಭಾವ ಬೀರಿದೆ. ನಿಫಾ ವೈರಸ್ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ಹಣ್ಣು ಮಾರಾಟ ಪ್ರಮಾಣ ಭಾರೀ ಕುಸಿತ ಕಂಡಿದೆ.
ನಿಫಾ ವೈರಸ್ ಕುರಿತು ಮಂಗಳೂರಿಗರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದೆಂಬ ಸೂಚನೆಯನ್ನು ಆರೋಗ್ಯ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜನರು ಹಣ್ಣು ಖರೀದಿಗೆ ಹಿಂದೆಟು ಹಾಕುತ್ತಿದ್ದಾರೆ . ಮಂಗಳೂರಿಗೆ ಬರುವ ಕೆಲ ಹಣ್ಣುಗಳು ಕೇರಳದಿಂದ ಬರುತ್ತಿರುವ ಕಾರಣ ಜನರು ಹಣ್ಣುಗಳ ಖರೀದಿಯ ಗೋಜಿಗೂ ಹೋಗುತ್ತಿಲ್ಲ.
ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ ಈ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸ್ಲಿಂ ಭಾಂದವರು ಉಪವಾಸ ಬಿಡುವ ವೇಳೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುತ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹಣ್ಣುಗಳ ಮಾರಾಟ ಹೆಚ್ಚಾಗಿತ್ತು. ಆದರೆ ನಿಫಾ ವೈರಸ್ ವ್ಯಾಪಿಸುವ ಭೀತಿ ಈಗ ಹಣ್ಣಿನ ವ್ಯಾಪಾರದ ಮೇಲೆ ಬಿದ್ದಿದೆ. ಕಳೆದ ಮೂರು ದಿನ ಗಳಿಂದ ಮಂಗಳೂರು ಹಣ್ಣಿನ ಮಾರುಕಟ್ಟೆಯಲ್ಲಿ ವ್ಯಾಪಾರ ದಿಡೀರ್ ಕುಸಿತ ಕಂಡಿದೆ. ಇದು ಹಣ್ಣಿನ ವ್ಯಾಪಾರಿಗಳಲ್ಲಿ ವಿರಾಶೆ ಮೂಡಿಸಿದೆ.
ಹಣ್ಣುಗಳು ಮಾತ್ರವಲ್ಲದೇ ಮಾಂಸ ವ್ಯಾಪಾರದ ಮೇಲೂ ನಿಫಾ ವೈರಸ್ ಪರಿಣಾಮ ಬೀರಿದ. ನಿಫಾ ವೈರಸ್ ಪ್ರಾಣಿಗಳ ಮೂಲಕವೂ ಹರಡುತ್ತದೆ ಎನ್ನುವ ಕಾರಣ ಜನರು ಕೋಳಿ, ಕುರಿ, ಹಂದಿ ಮಾಂಸ ಖರೀದಿಗೂ ಮುಂದಾಗುತ್ತಿಲ್ಲ. ಈ ಕಾರಣ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.