LATEST NEWS
ಮಂಗಳೂರು – ರಾತ್ರಿ ಕರ್ಪ್ಯೂ ಉಲ್ಲಂಘಿಸಿದವರ ವಶಕ್ಕೆ ಪಡೆದ ಪೊಲೀಸರು

ಮಂಗಳೂರು ಸೆಪ್ಟೆಂಬರ್ 23: ರಾತ್ರಿ ಕರ್ಪ್ಯೂ ಉಲ್ಲಂಘಿಸಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ವಾಹನ ಸಮೇತ ಸವಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಕೊರೊನಾ ಪ್ರಕರಣ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ವಾರಾಂತ್ಯದ ಕರ್ಫ್ಯೂವನ್ನು ಮಾತ್ರ ಸಡಿಲಿಕೆ ಮಾಡಲಾಗಿದ್ದು, ರಾತ್ರಿ ಕರ್ಪ್ಯೂ ಮುಂದುವರೆಸಲಾಗಿದೆ. ಕೊರೊನಾ ಪ್ರಕರಣ ಇಳಿಕೆ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಬಂದಿದ್ದು, ಕೆಲವರು ರಾತ್ರಿ 9 ಗಂಟೆಯ ಬಳಿಕ ವಿನಾ ಕಾರಣ ನಗರದಲ್ಲಿ ಸುತ್ತಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯ ಬಳಿಕ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದವರನ್ನು ಪೊಲೀಸರು ಅಡ್ಡ ಹಾಕಿದ್ದು, ಎಲ್ಲಾ ವಾಹನಗಳನ್ನು ಪುರಭವನದ ಪರಿಸರದಲ್ಲಿ ನಿಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ದಾಖಲೆ ಪತ್ರಗಳಿಲ್ಲದೇ ಅಡ್ಡಾಡುವವರು, ವಿನಾಕಾರಣ ಎಲ್ಲೆಂದರಲ್ಲಿ ತಿರುಗಾಡುತ್ತಿರುವವರ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ನಿನ್ನೆ ರಾತ್ರಿ ನಗರ ಸಂಚಾರಿ ಪೊಲೀಸರಿಂದ ವಿಶೇಷ ತಪಾಸಣೆ ಕೈಗೊಳ್ಳಲಾಗಿತ್ತು. ಇದರಲ್ಲಿ ದಾಖಲೆ ಇಲ್ಲದೆ ತಿರುಗಾಡುತ್ತಿದ್ದವರು, ಬೈಕ್ ವೀಲಿಂಗ್, ಅನಗತ್ಯವಾಗಿ ಬೀದಿ ಬದಿ ಕುಳಿತುಕೊಂಡಿರುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.