LATEST NEWS
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – ಐವರು ಆರೋಪಿಗಳು ಎನ್ಐಎ ವಶಕ್ಕೆ

ಬೆಂಗಳೂರು ಅಗಸ್ಟ್ 19:ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಐವರು ಪ್ರಮುಖ ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಹೆಚ್ಚಿನ ವಿಚಾರಣೆಗೆ ಎನ್ಐಎ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಎನ್ಐಎಗೆ ಹಸ್ತಾಂತರವಾಗಿದ್ದು. ಈ ಹಿನ್ನಲೆ ಪ್ರಕರಣದ ಎಲ್ಲಾ ದಾಖಲೆಗಳು ಮಂಗಳೂರು ಕೋರ್ಟ್‌ನಿಂದ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಇದೇ 17ರಂದು ವರ್ಗಾವಣೆಯಾಗಿದ್ದು, ಗುರುವಾರ ನ್ಯಾಯಾಧೀಶ ಸಿ.ಎಂ.ಗಂಗಾಧರ ವಿಚಾರಣೆ ನಡೆಸಿದರು.

ಈ ವೇಳೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್, ’ಆರೋಪಿಗಳನ್ನು ಹೆಚ್ಚಿನ ಪೊಲೀಸ್ ತನಿಖೆಗೆ ಒಳಪಡಿಸಬೇಕಾಗಿದ್ದು ಯುಎಪಿ ಕಾಯ್ದೆ–1967ರ ಕಲಂ 43–ಡಿ ಅಡಿಯಲ್ಲಿ ವಶಕ್ಕೆ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಆರೋಪಿಗಳಾದ ತಂಬಿನ ಮಕ್ಕಿಯ ನೌಫಾಲ್, ನಾವೂರಿನ ಸೈನುಲ್ ಅಬಿದ್, ನಾವೂರಿನ ಮೊಹ ಮದ್ ಶಿಯಾಬ್, ಎಲಿಮಲೆಯ ಅಬ್ದುಲ್ ಬಷೀರ್, ಅಂಕತಡ್ಕದ ರಿಯಾಜ್ ಅವರನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿತು. ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು