National
ಗೋಲ್ಡ್ ಸ್ಮಗ್ಲಿಂಗ್ ಆರೋಪಿ ಸ್ವಪ್ನಾ ಬೆಂಗಳೂರಿನಲ್ಲಿ ಸೆರೆ
ಬೆಂಗಳೂರು, ಜುಲೈ 11 : ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಹೆಸರು ಕೇಳಿಬಂದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸ್ವಪ್ನಾ ಸುರೇಶ್ ಳನ್ನು ಬೆಂಗಳೂರಿನ ಕೋರಮಂಗಲದಲ್ಲಿ ಎನ್ಐಎ ತನಿಖಾ ದಳ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರದ ಯುಎಇ ದೂತಾವಾಸ ಕಚೇರಿ ಹೆಸರಲ್ಲಿ 30 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಲಾಗಿತ್ತು. ವಿಮಾನ ನಿಲ್ದಾಣಕ್ಕೆ ಬಂದ ಕಾರ್ಗೋ ಗೂಡ್ಸ್ ನಲ್ಲಿ ಪತ್ತೆಯಾಗಿದ್ದ ಚಿನ್ನವನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಪ್ರಕರಣದಲ್ಲಿ ಸಿಎಂ ಕಚೇರಿಗೆ ಆಪ್ತಳಾಗಿದ್ದ ಸ್ವಪ್ನಾ ಸುರೇಶ್ ಎಂಬಾಕೆಯ ಕೈವಾಡ ಇರುವುದನ್ನು ಪತ್ತೆ ಮಾಡಿದ್ದರು. ಆದರೆ, ವಿಚಾರ ಬಯಲಾಗುತ್ತಿದ್ದಂತೆಯೇ ಸ್ವಪ್ನಾ ತಲೆಮರೆಸಿಕೊಂಡಿದ್ದಳು. ಇದೇ ವೇಳೆ, ಕೇರಳದಲ್ಲಿ ರಾಜಕೀಯ ಕೆಸರೆರಚಾಟ ನಡೆದಿದ್ದು ಸಿಎಂ ಪಿಣರಾಯಿ ವಿಜಯನ್ ಕೈವಾಡದ ಬಗ್ಗೆ ಆರೋಪ ಕೇಳಿಬಂದಿತ್ತು. ಐಟಿ ಸೆಲ್ ಮ್ಯಾನೇಜರ್ ಆಗಿದ್ದ ಸ್ವಪ್ನಾ ವಿರುದ್ಧ ಆರೋಪ ಕೇಳಿಬರುತ್ತಲೇ ಸಿಎಂ ಆಕೆಯನ್ನು ಹುದ್ದೆಯಿಂದ ಕಿತ್ತು ಹಾಕಿದ್ದರು. ಅಲ್ಲದೆ, ಐಟಿ ಸೆಲ್ ಚೇರ್ಮನ್ ಆಗಿದ್ದ ಐಎಎಸ್ ಅಧಿಕಾರಿ ಕೆ. ಶಿವಶಂಕರ್ ಅವರನ್ನು ವಜಾ ಮಾಡಿದ್ದರು. ಹೀಗಾಗಿ ಪ್ರತಿಪಕ್ಷಗಳು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದವು.
ಇದೀಗ ಬೆಂಗಳೂರಿನ ಕೋರಮಂಗಲದಲ್ಲಿ ಸ್ನೇಹಿತ ಸಂದೀಪ್ ನಾಯರ್ ಜೊತೆಗಿದ್ದ ಸ್ವಪ್ನಾಳನ್ನು ಕೇರಳ ಪೊಲೀಸರು ಪತ್ತೆ ಮಾಡಿದ್ದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ರಾತ್ರಿಯೇ ಆಕೆಯನ್ನು ಕೇರಳಕ್ಕೆ ಒಯ್ಯಲು ತಯಾರಿ ನಡೆಸಿದ್ದಾರೆ. 15 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪ ಹೊತ್ತಿರುವ ಸ್ವಪ್ನಾಳಿಗೆ ಕೇರಳದಲ್ಲಿ ಹೈಲೆವೆಲ್ ರಾಜಕಾರಣಿಗಳ ನಂಟು ಹೊಂದಿದ್ದಾಳೆ. ಹೀಗೆ ಏಳು ಬಾರಿ ಚಿನ್ನ ಕಳ್ಳ ಸಾಗಣೆ ಆಗಿರುವ ಬಗ್ಗೆ ಅನುಮಾನಗಳಿದ್ದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.