LATEST NEWS
ಉಪರಾಷ್ಟ್ರಪತಿಗಳಿಗೋಸ್ಕರ ಮಳೆಯಲ್ಲಿ ಡಾಂಬರು ಹಾಕಿದವರು ಈಗ ಕಾಣೆಯಾಗಿದ್ದಾರೆ…!
ಉಪರಾಷ್ಟ್ರಪತಿಗಳಿಗೋಸ್ಕರ ಮಳೆಯಲ್ಲಿ ಡಾಂಬರು ಹಾಕಿದವರು ಈಗ ಕಾಣೆಯಾಗಿದ್ದಾರೆ…!
ಮಂಗಳೂರು ನವೆಂಬರ್ 11: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಮಂಗಳೂರು ಭೇಟಿ ಸಂದರ್ಭ ಮಳೆಯನ್ನು ಲೆಕ್ಕಿಸದೇ ರಾಷ್ಟ್ರೀಯ ಹೆದ್ದಾರಿ 66ರ ಹೊಂಡಗಳಿಗೆ ನೀರಿನ ಮೇಲೆ ಡಾಂಬರು ಹಾಕಿ ಮುಚ್ಚಿದ್ದ ಎನ್ ಎಚ್ಎಐ ಅಧಿಕಾರಿಗಳು ನಂತರ ಬಿಸಿಲು ಬಂದರೂ ಕೂಡ ಸುಮ್ಮನೆ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಎನ್‌ಐಟಿಕೆಯ ಘಟಿಕೋತ್ಸವ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಯವರು ಬರುವ ಮುಂಚೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾರ್ವಜನಿಕರು ಹೊಂಡಗುಂಡಿಗಳಲ್ಲಿ ಹೋರಾಟ ನಡೆಸುತ್ತ ಪ್ರಯಾಣಿಸುತ್ತಿದ್ದರು. ರಸ್ತೆ ರಿಪೇರಿ ಮಾಡಿ ಎಂದು ಸಾರ್ವಜನಿಕರು ಎಷ್ಟೇ ಕೇಳಿಕೊಂಡರು ಕಿವಿಕೆಳಿಸದ ಹಾಗೆ ಇದ್ದ ಎನ್ ಎಚ್ಎಐ ಅಧಿಕಾರಿಗಳು ಜಿಲ್ಲಾಧಿಕಾರಿಯವರು ಉಪರಾಷ್ಟ್ರಪತಿ ಸಂಚಾರ ಮಾಡುವ ರಸ್ತೆಗೆ ತೇಪೆ ಹಾಕಿ ಎಂದು ಆದೇಶ ಹೊರಡಿಸಿದ್ದೆ ತಡ, ತಂಡಗಳನ್ನು ರಚಿಸಿಕೊಂಡು ಬಾರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ನೀರಿನ ಮೇಲೆ ಡಾಂಬರು ಹಾಕಿ ರಿಪೇರಿ ಮಾಡಿದ್ದರು. ಉಪ ರಾಷ್ಟ್ರಪತಿಯವರು ತಮ್ಮ ಕಾರ್ಯಕ್ರಮ ನಡೆಸಿ ಹೋದ ಬಳಿಕ ರಿಪೇರಿ ಕಾರ್ಯ ಅಲ್ಲಿಗೇ ಸ್ತಬ್ಧಗೊಂಡಿದೆ.
ಇದಕ್ಕೆ ಮೊದಲು ನಡೆದ ಪರಿಶೀಲನಾ ಸಭೆಗಳಲ್ಲಿ ಬಿ.ಸಿ.ರೋಡ್- ಸುರತ್ಕಲ್ ಹೆದ್ದಾರಿ ರಿಪೇರಿಗೆ 24 ಕೋಟಿ ರೂ.ಮೊತ್ತದ ಪ್ಯಾಕೇಜ್ ಸಿದ್ಧಗೊಂಡಿದೆ, ಮಳೆಯಿಂದಾಗಿ ತಡವಾಗಿದೆ ಎನ್ನುತ್ತಿದ್ದ ಅಧಿಕಾರಿಗಳು ಈಗ ಸುಮ್ಮನಿದ್ದಾರೆ. ಕೆಟ್ಟ ಕೆಲವು ಭಾಗಗಳಿಗೆ ಅವೈಜ್ಞಾನಿಕವಾಗಿ ಡಾಂಬರು ಹಾಕಿ ಒಮ್ಮೆಗೆ ಸರಿಪಡಿಸಲಾಗಿದೆ. ಆದರೆ ಸರಿಪಡಿಸುವುದಕ್ಕೆಂದು ಕೆಲವು ಕಡೆಗಳಲ್ಲಿ ಇಡೀ ರಸ್ತೆಯ ಮೇಲ್ಪದರವನ್ನೇ ಬುಲ್‌ಡೋಜರ್‌ನಿಂದ ಕೆರೆದಿದ್ದಾರೆ. ಆ ಭಾಗ ಹಾಗೇ ಉಳಿದುಕೊಂಡಿದೆ. ಮುಖ್ಯವಾಗಿ ಕೂಳೂರು ಸೇತುವೆ ಕಳೆದು ಸುರತ್ಕಲ್‌ನತ್ತ ಸಾಗುವಾಗ ಎನ್‌ಎಂಪಿಟಿ ಮುಂಭಾಗದಲ್ಲಿ, ಮುಂದೆ ಪಣಂಬೂರು ಬೀಚ್ ಕ್ರಾಸ್ ಬಳಿ, ಪಣಂಬೂರು- ಬೈಕಂಪಾಡಿ ಮಧ್ಯೆ ಇಂತಹ ಹಲವು ಭಾಗಗಳಿವೆ. ಅವುಗಳನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ.