LATEST NEWS
ತನ್ವೀರ್ ಸೇಠ್ ಬಳಿಕ ಹಿಟ್ ಲಿಸ್ಟ್ ನಲ್ಲಿ ಮಾಜಿ ಸಚಿವ ಯು.ಟಿ ಖಾದರ್…..!
ತನ್ವೀರ್ ಸೇಠ್ ಬಳಿಕ ಹಿಟ್ ಲಿಸ್ಟ್ ನಲ್ಲಿ ಮಾಜಿ ಸಚಿವ ಯು.ಟಿ ಖಾದರ್…..!
ಮಂಗಳೂರು ನವೆಂಬರ್ 24: ಮೈಸೂರಿನಲ್ಲಿ ಕಾಂಗ್ರೇಸ್ ನ ಪ್ರಭಾವಿ ನಾಯಕ ತನ್ವೀರ್ ಸೇಠ್ ಹತ್ಯೆ ಯತ್ನ ನಂತರ ಕರಾವಳಿಯ ಕಾಂಗ್ರೇಸ್ ನ ಮತ್ತೊಬ್ಬ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಯು.ಟಿ ಖಾದರ್ ಈಗ ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದ್ದು, ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಮಂಗಳೂರು ಪೊಲೀಸರ ಭದ್ರತೆ ನೀಡಿದ್ದಾರೆ.
ಇದೇ ತಿಂಗಳ ನವೆಂಬರ್ 17 ರಂದು ರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಾಸಕ ತನ್ವೀರ್ ಸೇಠ್ ಕತ್ತಿನ ಭಾಗಕ್ಕೆ ಹರಿತ ಆಯುಧದಿಂದ ಇರಿದು ಕೊಲೆಗೆ ಯತ್ನಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತ ಫರ್ಹಾನ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರಿಗೆ ಅಘಾತಕಾರಿ ಮಾಹಿತಿ ಸಿಕ್ಕಿದ್ದು, ದುಷ್ಕರ್ಮಿಗಳ ಹಿಟ್ ಲಿಸ್ಟ್ ನಲ್ಲಿ ಕೇವಲ ತನ್ವೀರ್ ಸೆಠ್ ಮಾತ್ರವಲ್ಲದೆ ಕರಾವಳಿಯ ಪ್ರಭಾವಿ ನಾಯಕ ಯು.ಟಿ ಖಾದರ್ ಅವರ ಹೆಸರೂ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಪ್ರಮುಖ ಮುಸ್ಲಿಂ ಜಾತ್ಯಾತೀತ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಮಾಹಿತಿಯೂ ತನಿಖೆಯಿಂದ ಬಹಿರಂಗಗೊಂಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪ್ರಮುಖ ರಾಜಕೀಯ ಮುಖಂಡರಿಗೆ ಭದ್ರತೆ ನೀಡಲು ಮುಂದಾಗಿದ್ದಾರೆ.
ಮಾಜಿ ಸಚಿವ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿರುವ ಯು.ಟಿ ಖಾದರ್ ಅವರಿಗೂ ಭದ್ರತೆ ನೀಡಲಾಗಿದೆ. ಸದ್ಯ ಖಾದರ್ ಅವರು ಉಪ ಚುನಾವಣಾ ಪ್ರಚಾರಕ್ಕಾಗಿ ಮೈಸೂರು ಜಿಲ್ಲೆಯ ಹುಣಸೂರು ಪ್ರವಾಸದಲ್ಲಿದ್ದು ಅಲ್ಲಿ ಹೆಚ್ಚುವರಿ ಭದ್ರತೆಯನ್ನು ನೀಡಲಾಗಿದೆ.
ಭದ್ರತಾ ವಾಹನದ ಜೊತೆಗೆ ಐವರು ಪೊಲೀಸರನ್ನು ಭದ್ರತೆಯಾಗಿ ನಿಯೋಜಿಸಲಾಗಿದೆ. ಖಾದರ್ ಅವರು ಭದ್ರತೆಯನ್ನು ನಿರಾಕರಿಸಿದರೂ ಜೀವಬೆದರಿಕೆಯ ಕುರಿತಾಗಿ ಗುಪ್ತಚರ ಇಲಾಖೆಯ ದೊರಕಿದ ನಿಖರ ಮಾಹಿತಿ ಅಧಾರದಲ್ಲಿ ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.
ಈ ಕುರಿತಂತೆ ಮಾಧ್ಯಮಗಳಿಗ ಮಾಹಿತಿ ನೀಡಿದ್ದ ಯು.ಟಿ ಖಾದರ್, “ಮತೀಯ ಸಂಘಟನೆಯೊಂದರಿಂದ ಜೀವ ಬೆದರಿಕೆ ಇರುವುದನ್ನು ಪೊಲೀಸರು ಧೃಡಪಡಿಸಿದ್ದಾರೆ. ಈ ಕಾರಣಕ್ಕಾಗಿ ಭದ್ರತೆಯನ್ನು ನೀಡಿದ್ದಾರೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಬೆಳೆಯಲು ಯು.ಟಿ ಖಾದರ್ ತಡೆಯಾಗಿದ್ದಾರೆ ಎಂದ ಕಾರಣಕ್ಕಾಗಿ ಟಾರ್ಗಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ನೀಡಿದ್ದಾರೆ. ನಾನು ಭದ್ರತೆಯನ್ನು ನಿರಾಕರಿಸಿದರೂ ಸ್ವತಃ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭದ್ರತೆಯನ್ನು ಪಡೆದುಕೊಳ್ಳಲು ಒತ್ತಾಯಿಸಿದ್ದಾರೆ” ಎಂದರು.