LATEST NEWS
ಶಿರೂರು ಮಠಕ್ಕೆ ಶೀಘ್ರ ಉತ್ತರಾಧಿಕಾರಿ ನೇಮಕ – ದ್ವಂದ್ವ ಮಠಾಧೀಶ ಸೋದೆ ವಿಶ್ವವಲ್ಲಭ ತೀರ್ಥರಿಂದ ಘೋಷಣೆ

ಉಡುಪಿ ಡಿಸೆಂಬರ್ 6: ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ವೃಂದಾವನಸ್ಥರಾದ ಬಳಿಕ ತೇರವಾಗಿದ್ದ ಶಿರೂರು ಮಠಾಧೀಶರ ಪೀಠಕ್ಕೆ ಶೀಘ್ರದಲ್ಲೇ ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಎಂದು ದ್ವಂದ್ವ ಮಠಾಧೀಶ ಸೋದೆ ವಿಶ್ವವಲ್ಲಭ ತೀರ್ಥರು ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಉಡುಪಿಯಲ್ಲಿ ಮಾಹಿತಿ ನೀಡಿದ ಅವರು ದ್ವಂದ್ವ ಮಠಾಧಿಪತಿಗಳ ನೆಲೆಯಲ್ಲಿ ಮಠದ ಆಡಳಿತ ಉಸ್ತುವಾರಿ ವಹಿಸಿದ್ದು, ಅನೇಕ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲಾಗುತ್ತಿದೆ. ಉತ್ತರಾಯಣದಲ್ಲಿ ಮಠಕ್ಕೆ ಉತ್ತರಾಧಿಕಾರಿ ನೇಮಿಸಲಾಗುವುದು ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಪ್ತ ವಯಸ್ಸಿನ ವಟುವನ್ನು ಆಯ್ಕೆ ಮಾಡಿದ್ದು, ಗುರುಕುಲದಲ್ಲಿ ಧಾರ್ವಿುಕ ಶಿಕ್ಷಣ ನೀಡಲಾಗುತ್ತಿದೆ. ಹಿರಿಯ ಅಷ್ಟ ಮಠಾಧೀಶರ ವಿಶೇಷ ಸಹಕಾರದೊಂದಿಗೆ ಉತ್ತರಾಯಣ ಪರ್ವ ಕಾಲದಲ್ಲಿ ಸಂನ್ಯಾಸ ದೀಕ್ಷೆ ಕೊಡಲಾಗುವುದು ಎಂದು ಶ್ರೀಗಳು ತಿಳಿಸಿದರು. ಶಿರೂರು ಮೂಲ ಮಠ ಮತ್ತು ಉಡುಪಿ ಮಠದಲ್ಲಿ ಕೆಲವು ಜೀಣೋದ್ಧಾರ ಕಾರ್ಯ ಮಾಡಲಾಗಿದೆ. ಎಲ್ಲ ಕಾಮಗಾರಿ ಹಾಗೂ ಶಿರೂರು ಮಠದ ದೈನಂದಿನ ಖರ್ಚು ಹಾಗೂ ಶಿರೂರು ಗೋಶಾಲೆಯ ನಿರ್ವಹಣೆಗೆ ಮಣಿಪಾಲದಲ್ಲಿರುವ ಕಟ್ಟಡದಿಂದ ಬರುವ ಬಾಡಿಗೆ ಹಾಗೂ ರಥಬೀದಿಯ ಶಿರೂರು ಮಠದ ಕಟ್ಟಡಗಳಿಂದ ಬರುವ ಬಾಡಿಗೆ ಬಳಸಲಾಗಿದೆ. ಮಠದ ಸೊತ್ತುಗಳನ್ನು ವಿಕ್ರಯಿಸಿಲ್ಲ, ಪರಭಾರೆ ಮಾಡಿಲ್ಲ ಎಂದು ಶ್ರೀಗಳು ಹೇಳಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.