KARNATAKA
ವಿಶ್ವನಾಥ್, ಯೋಗೀಶ್ವರ್, ಭಾರತಿ ಶೆಟ್ಟಿಗೆ ಎಂಎಲ್ಸಿ ಭಾಗ್ಯ !
ತನ್ನ ಬಣದವರಿಗೇ ಮಣೆ, ಸಿಎಂ ಯಡಿಯೂರಪ್ಪ ಕೈಮೇಲು
ಬೆಂಗಳೂರು, ಜುಲೈ 22: ಕೊನೆಗೂ ಹಳ್ಳಿಹಕ್ಕಿ ಎಚ್. ವಿಶ್ವನಾಥ್ ಶಾಸಕರಾಗಿದ್ದಾರೆ. ವಿಧಾನಸಭೆಯಿಂದ ನಾಮ ನಿರ್ದೇಶನ ಕೋಟಾದ ಐದು ಸ್ಥಾನಗಳಿಗೆ ಬಿಜೆಪಿ ಸರಕಾರ ವಿಶ್ವನಾಥ್, ಸಿ.ಪಿ.ಯೋಗೀಶ್ವರ್, ಮಂಗಳೂರು ಮೂಲದ ಭಾರತಿ ಶೆಟ್ಟಿ ಸೇರಿ ಐವರನ್ನು ನೇಮಕ ಮಾಡಿದೆ.
ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಪರಿಷತ್ತಿಗೆ ನಾಮನಿರ್ದೇಶನ ಆಗಿದ್ದ ಕೆ.ಅಬ್ದುಲ್ ಜಬ್ಬಾರ್, ಜಯಮಾಲ, ಐವನ್ ಡಿಸೋಜ, ಇಕ್ಬಾಲ್ ಅಹ್ಮದ್ ಸರಡಗಿ ಮತ್ತು ತಿಪ್ಪಣ್ಣ ಕಮಕನೂರ್ ಅವರ ಸದಸ್ಯತ್ವ ಅವಧಿ ಜೂನ್ 23ರಂದು ಅಂತ್ಯಗೊಂಡಿತ್ತು. ಖಾಲಿಯಾದ ಜಾಗಕ್ಕೆ ಈಗ ಐವರನ್ನು ನೇಮಕ ಮಾಡಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಎಚ್. ವಿಶ್ವನಾಥ್ ವಿಧಾನ ಪರಿಷತ್ ಸ್ಥಾನಕ್ಕಾಗಿ ಪ್ರಬಲ ಲಾಬಿ ನಡೆಸಿದ್ದರು. ಆದರೆ ಟಿಕೆಟ್ ಸಿಗದೇ ಕಂಗಾಲಾಗಿದ್ದ ವಿಶ್ವನಾಥ್, ಸಿಎಂ ಯಡಿಯೂರಪ್ಪ ಮೇಲೆ ನಂಬಿಕೆ ಇರಿಸಿದ್ದಾಗಿ ಹೇಳಿಕೊಂಡು ಬರುತ್ತಿದ್ದರು. ಈಗ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ವಿಶ್ವನಾಥ್ ಕೊನೆಗೂ ಶಾಸಕರಾಗಿದ್ದಾರೆ.
ಇನ್ನು ಮಹಿಳಾ ಕೋಟಾದಲ್ಲಿ ಚಿತ್ರನಟಿ ಮಾಳವಿಕಾ ಅವರನ್ನು ಪರಿಗಣಿಸಲು ಒತ್ತಡ ಇತ್ತು. ಸಂತೋಷ್ ಬಣ ಮಾಳವಿಕಾ ಪರ ಬ್ಯಾಟಿಂಗ್ ಮಾಡಿದ್ದೂ ಆಗಿತ್ತು. ಆದರೆ, ನಾಮ ನಿರ್ದೇಶನಕ್ಕೆ ಆಯ್ಕೆ ಮಾಡುವುದು ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟಿದ್ದು ತನ್ನ ಪರ ಇದ್ದವರನ್ನೇ ಆಯ್ಕೆ ಮಾಡಿದ್ದಾರೆ. ಭಾರತಿ ಶೆಟ್ಟಿ ಹಿಂದಿನಿಂದಲೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಮಹಿಳೆ. ಮೂಲತಃ ಮಂಗಳೂರಿನ ನಿವಾಸಿಯಾದ್ರೂ ಮದುವೆಯಾದ ಬಳಿಕ ಶಿವಮೊಗ್ಗದಲ್ಲಿ ನೆಲೆಸಿ ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು. ಇದೀಗ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನು ಸಿ.ಪಿ.ಯೋಗೀಶ್ವರ್ ಕೂಡ ಶಾಸಕರಾಗಲು ಭಾರೀ ಪ್ರಯತ್ನ ಪಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಕಳೆದ ಬಾರಿ ಬಿಜೆಪಿ ಸರಕಾರ ತರುವುದಕ್ಕೂ ಯೋಗೀಶ್ವರ್ ತೆರೆಮರೆಯಲ್ಲಿ ಕೆಲಸ ಮಾಡಿದ್ದರು. ಇದೀಗ ಕೆಲಸಕ್ಕೆ ಈಗ ಫಲ ಸಿಕ್ಕಿದೆ. ಈ ಮೂವರ ಜೊತೆ ಪಕ್ಷಕ್ಕಾಗಿ ದುಡಿದ ಶಾಂತರಾಮ್ ಸಿದ್ಧಿ ಹಾಗೂ ಡಾ.ತಳವಾರ್ ಸಾಬಣ್ಣ ಅವರಿಗೂ ಸ್ಥಾನ ಸಿಕ್ಕಿದೆ.
ಸಿಎಂ ಯಡಿಯೂರಪ್ಪ, ಕೊನೆಗೂ ಬಿಜೆಪಿ ಸರಕಾರ ಬರಲು ಕಾರಣರಾದ 15 ಮಂದಿ ಸೇರಿದಂತೆ ಅದಕ್ಕಾಗಿ ದುಡಿದವರಿಗೂ ತಕ್ಕ ಹುದ್ದೆಗಳನ್ನು ನೀಡಿದಂತಾಗಿದೆ.