DAKSHINA KANNADA
ಚಪ್ಪಲಿ ಹಾರ ಹಾಕುವ ನೀಚ ಕೃತ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೈ ಹಾಕುವುದಿಲ್ಲ: ಅಶೋಕ್ ಕುಮಾರ್ ರೈ

ಪುತ್ತೂರು ಮೇ 16 : ಬಿಜೆಪಿ ಮುಖಂಡರ ಬ್ಯಾನರ್ ಗಳಿಗೆ ಚಪ್ಪಲಿ ಹಾರ ಹಾಕುವ ನೀಚ ಕೃತ್ಯವನ್ನು ಕಾಂಗ್ರೇಸ್ ಕಾರ್ಯಕರ್ತರು ಮಾಡುವುದಿಲ್ಲ, ನಮಗೆ ಯಾರ ಮೇಲೆ ದ್ವೇಷವೂ ಇಲ್ಲ ಎಂದು ನೂತನ ಶಾಸಕ ಅಶೋಕ್‌ಕುಮಾರ್ ರೈ ಅವರು ತಿಳಿಸಿದ್ದಾರೆ.
ಪುತ್ತೂರಿನ ಬಸ್ ನಿಲ್ದಾಣದ ಬಳಿ ಬಿಜೆಪಿ ಮುಖಂಡರ ಭಾವಚಿತ್ರ ಇರುವ ಬ್ಯಾನರ್ ಅಳವಡಿಸಿ, ಅದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸುತ್ತಲಿನ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಶಾಸಕ ಅಶೋಕ್‌ಕುಮಾರ್ ರೈ ಕೋಡಿಂಬಾಡಿ ಆಗ್ರಹಿಸಿದ್ದಾರೆ.

ಘಟನೆಯ ಖಂಡಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಶಾಸರು, ಪರೋಕ್ಷವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡಿದ್ದು ಅದನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸಿಗೆ ಮತದಾರರು ನೀಡಿರುವ ಬೆಂಬಲವನ್ನು ಕಂಡು ಬಿಜೆಪಿಗೆ ಆಘಾತವಾಗಿದೆ. ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಬಿಜೆಪಿಗರ ಕಾಯಕವಾಗಿದೆ. ಅವರದ್ದೇ ಸರ್ಕಾರ ಇರುವಾಗಲೂ ಪ್ರತಿಭಟನೆ ಮಾಡಿದ್ದರು. ಈಗಲೂ ಮಾಡುತ್ತಲೇ ಇದ್ದಾರೆ ಎಂದು ಅವರು ಟೀಕಿಸಿದ್ದಾರೆ.