KARNATAKA
ಕರ್ನಾಟಕದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ
ನವದೆಹಲಿ ಜುಲೈ 06: ಕೇಂದ್ರ ಸರಕಾರದ ಸಂಪುಟ ಪುನಾರಚನೆಯ ಹೊತ್ತಿನಲ್ಲೇ, ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ಕರ್ನಾಟಕದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರು ನೇಮಕವಾಗಿದ್ದಾರೆ.
ರಾಜ್ಯಸಭೆ ಸದಸ್ಯರಾಗಿರುವ ಅವರು ಪ್ರಸ್ತುತ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
73 ವರ್ಷ ಪ್ರಾಯದ ಗೆಲ್ಹೋಟ್ ಮಧ್ಯಪ್ರದೇಶದ ದಲಿತ ಕುಟುಂಬದಲ್ಲಿ ಜನಿಸಿ ಉನ್ನತ ವಿದ್ಯಾಭ್ಯಾಸ ಮಾಡಿ, ರಾಜಕೀಯ ವಲಯದಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 1996ರಿಂದ 2009ರ ವರೆಗೆ ಮಧ್ಯಪ್ರದೇಶದ ಶಾಜಾಪುರ ಲೋಕಸಭೆ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು. 2014ರಿಂದ ಈಗಿನ ವರೆಗೂ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ರಿಂದ ಅವರು ರಾಜ್ಯಸಭೆಯಲ್ಲಿ ಎನ್‍ಡಿಎ ನಾಯಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಕರ್ನಾಟಕದ ಉಸ್ತುವಾರಿಯಾಗಿದ್ದ ಗೆಹ್ಲೋಟ್ ಅವರನ್ನು ಇದೀಗ ವಿ.ಆರ್.ವಾಲಾ ಜಾಗಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಚರ್ಚೆಯ ಬೆನ್ನಲ್ಲೇ ಗೆಹ್ಲೋಟ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಕುತೂಹಲ ಹುಟ್ಟಿಸಿದೆ.