DAKSHINA KANNADA
ಕುಕ್ಕೆ ಸುಬ್ರಮಣ್ಯ ಬ್ರಹ್ಮರಥ ನಿರ್ಮಾಣಕ್ಕೆ ಮುತ್ತಪ್ಪ ರೈ ಗೆ ಆತಿಥ್ಯ , ಭಕ್ತರ ವಿರೋಧ
ಸುಳ್ಯ,ಅಕ್ಟೋಬರ್ 17: ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನವಾದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿಯಾಗಿರುವ ಜಯಕರ್ನಾಟಕ ಸಂಘಟನೆಯ ಪ್ರಮುಖ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಮುಂದಿಟ್ಟಿದ್ದು, ವ್ಯವಸ್ಥಾಪನಾ ಮಂಡಳಿ ಇದಕ್ಕೆ ಸದ್ದಿಲ್ಲದೆ ಒಪ್ಪಿಗೆಯನ್ನೂ ನೀಡಿದೆ.ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿಯ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.ಈ ಕಾರಣಕ್ಕಾಗಿ ರಾಜ್ಯದ ಎ ಗ್ರೇಡ್ ದೇವಸ್ಥಾನದ ಪಟ್ಟಿಯಲ್ಲಿರುವ ಹಾಗೂ ರಾಜ್ಯದ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮೊದಲನೆಯದಾಗಿ ಗುರುತಿಸಿಕೊಂಡಿರುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಬ್ರಹ್ಮರಥದ ನಿರ್ಮಾಣ ವಿಚಾರ ಇದೀಗ ಗೊಂದಲದ ಗೂಡಾಗುವ ಸಾಧ್ಯತೆ ಹೆಚ್ಚಾಗಿದೆ. ಉದ್ಯಮಿ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಿಂದ ಸುಬ್ರಮಣ್ಯ ಸ್ವಾಮಿಗೆ ಬ್ರಹ್ಮರಥ ನೀಡಲು ಮುಂದೆ ಬಂದಿದ್ದು, ಈ ವಿಚಾರವಾಗಿ ನಡೆದ ಚರ್ಚೆಯಲ್ಲಿ ಈ ಪ್ರಸ್ತಾಪಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ ಕಾರಣಕ್ಕಾಗಿ ಸ್ವಾಮಿಗೆ ಭಕ್ತರೆಲ್ಲಾ ನೀಡಿದ ಕಾಣಿಕೆಯ ಹಣವನ್ನು ಸೇರಿಸಿ ಬ್ರಹ್ಮರಥ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಗರ್ಭಗುಡಿ ಹಾಗೂ ಬ್ರಹ್ಮರಥಕ್ಕೆ ಭಾರೀ ಪಾವಿತ್ರ್ಯತೆಯಿದ್ದು, ಇದನ್ನು ಕೇವಲ ಒಬ್ಬ ವ್ಯಕ್ತಿ ನಿರ್ಮಿಸುವ ಸಂಪ್ರದಾಯವಿಲ್ಲ. ಭಕ್ತಾಧಿಗಳು ತಮ್ಮ ಕೈಲಾದಷ್ಟು ನೀಡಿದ ದೇಣಿಗೆಯಲ್ಲಿ ಈ ಎರಡನ್ನೂ ನಿರ್ಮಿಸಬೇಕಾಗುತ್ತದೆ. ಅಲ್ಲದೆ 1962 ರಿಂದಲೇ ದೇವಸ್ಥಾನದಲ್ಲಿ ಭಕ್ತರಿಂದ ಬ್ರಹ್ಮರಥ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಇತ್ತೀಚಿನ ವರೆಗೂ ಇದು ನಡೆದುಕೊಂಡು ಬಂದಿದೆ.
ಆದರೆ ಇದೀಗ ಏಕಾಏಕಿ ಉದ್ಯಮಿಯ ಸ್ವಂತ ಹಣವನ್ನು ಬಳಸಿ ಬ್ರಹ್ಮರಥ ನಿರ್ಮಾಣ ಮಾಡುವ ಔಚಿತ್ಯವನ್ನೂ ಭಕ್ತರು ಪ್ರಶ್ನಿಸಿದ್ದಾರೆ. ಮುತ್ತಪ್ಪ ರೈ ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚದ ಬ್ರಹ್ಮರಥವನ್ನು ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ದೇವಸ್ಥಾನಕ್ಕೆ ನೀಡಿದ್ದರು. ಆದರೆ ಕುಕ್ಕೆ ಸುಬ್ರಮಣ್ಯನಿಗೆ ಎಲ್ಲಾ ಭಕ್ತರೂ ಒಂದೇ ಆಗಿರುವುದರಿಂದ ಒಂದು ರೂಪಾಯಿ ದೇಣಿಗೆ ಕೊಡುವ ಭಕ್ತನನ್ನೂ ಈ ಮಹತ್ಕಾರ್ಯದಲ್ಲಿ ತೊಡಗಿಸಬೇಕು ಎನ್ನುವುದು ಭಕ್ತರ ಆಶಯವೂ ಆಗಿದೆ. ಈ ಮಹತ್ಕಾರ್ಯದಲ್ಲಿ ಉದ್ಯಮಿ ಮುತ್ತಪ್ಪ ರೈಗಳೂ ಸೇರಿಕೊಳ್ಳಬೇಕೆಂಬ ಒತ್ತಾಯವೂ ಭಕ್ತರದ್ದಾಗಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಪ್ರತಿವರ್ಷ ಭಕ್ತರು ದೇಣಿಗೆ ರೂಪದಲ್ಲಿ ಹಾಕುವ ಕಾಣಿಕೆ ಸರಿಸುಮಾರು 80-90 ಕೋಟಿ ರೂಪಾಯಿಗಳಷ್ಟಾಗಿದ್ದು, ಇದೇ ಹಣದಲ್ಲಿ ದೇವರಿಗೆ ಭವ್ಯವಾದ ಬ್ರಹ್ಮರಥವನ್ನು ನಿರ್ಮಿಸಬಹುದಾಗಿದ್ದರೂ, ಸರಕಾರವೇಕೆ ಕಾಣಿಕೆಯ ರೂಪದಲ್ಲಿ ಬ್ರಹ್ಮರಥವನ್ನು ನಿರ್ಮಿಸಲು ಹೊರಟಿದೆ ಎನ್ನುವ ಆಕ್ರೋಶವೂ ಇದೀಗ ಭಕ್ತರಲ್ಲಿ ಕೇಳಿಬರುತ್ತಿದೆ.