LATEST NEWS
ಬಂಟ್ವಾಳ – ಮುಂದುವರೆದ ಮಳೆ ಅಪಾಯಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ
ಮಂಗಳೂರು ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನೇತ್ರಾವತಿ ನದಿಯಲ್ಲಿ ಗುರುವಾರ ನೀರಿನ ಹರಿವು ಅಪಾಯದ ಮಟ್ಟವನ್ನು ತಲುಪಿದೆ.
ಉಪ್ಪಿನಂಗಡಿಯ ಬಳಿ ನೇತ್ರಾವತಿ ನೀರು ಹರಿವಿಗೆ 29 ಮೀಟರ್ ಅಪಾಯದ ಮಟ್ಟವಾಗಿದ್ದು, ಇಲ್ಲಿ ನೀರು 29.1 ಮೀಟರ್‌ವರೆಗೆ ತಲುಪಿದೆ. ಶಂಭೂರು ಬಳಿ ಎಎಂಆರ್ ಅಣೆಕಟ್ಟೆ ಬಳಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 18.9 ಮೀಟರ್ ವರೆಗೂ ನೀರಿನ ಮಟ್ಟ ತಲುಪಿದೆ. ಈ ಅಣೆಕಟ್ಟೆಯ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. ಬಂಟ್ವಾಳದ ಪಾಣೆಮಂಗಳೂರು ಆಲಡ್ಕದಲ್ಲಿ ಮನೆಗಳಿಗೆ ನೇತ್ರಾವತಿ ನದಿ ನೀರು ನುಗ್ಗಿದೆ. ಸುಮಾರು 12 ಮನೆಗಳಿಗೆ ನುಗ್ಗಿದ್ದ ನೇತ್ರಾವತಿ ನದಿ ನೀರು ನುಗ್ಗಿದ್ದು, 12 ಮನೆಗಳ ಜನರನ್ನ ಸ್ಥಳಾಂತರ ಮಾಡಲಾಗಿದೆ. ಅಲ್ಲದೆ ಜನರಿನ್ನು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
7 ಮೀ ಎತ್ತರದಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ತುಂಬೆ ಅಣೆಕಟ್ಟೆಯಲ್ಲಿ ಸದ್ಯಕ್ಕೆ 6 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ. ಈ ಅಣೆಕಟ್ಟೆಯ ಎಲ್ಲ 30 ಗೇಟ್‌ಗಳನ್ನು ತೆರೆಯಲಾಗಿದೆ.
ಗುರುವಾರ ಬೆಳಿಗ್ಗೆಯಿಂದಲೂ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಇತರ ಪ್ರಮುಖ ನದಿಗಳಾದ ಕುಮಾರಧಾರಾ, ಫಲ್ಗುಣಿ, ನಂದಿನಿ, ಶಾಂಭವಿ ನದಿಅಗಲಕೂ ತುಂಬಿ ಹರಿಯುತ್ತಿವೆ.
ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸತತ ನಾಲ್ಕು ದಿನಗಳಿಂದ ಸ್ನಾನಘಟ್ಟ ಮುಳುಗಡೆಯಾಗಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆಯೂ ವಿರಳವಾಗಿದೆ. ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದೆ.