DAKSHINA KANNADA
ಉಪ್ಪಿನಂಗಡಿ – ಒಂದೇ ದಿನದಲ್ಲಿ ಖಾಲಿಯಾದ ನೇತ್ರಾವತಿ ನದಿ ನೀರು
ಉಪ್ಪಿನಂಗಡಿ ಎಪ್ರಿಲ್ 19: ಮಂಗಳೂರು ನಗರಕ್ಕೆ ನೀರುಣಿಸಲು ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಎಎಂಆರ್ ಅಣೆಕಟ್ಟಿಗೆ ಹರಿಸಿದ್ದರ ಪರಿಣಾಮ ಒಂದೇ ದಿನದಲ್ಲಿ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಬರಿದಾಗಿದ್ದು, ಕೃಷಿಕರು ಸಂಕಷ್ಟದಲ್ಲಿದ್ದಾರೆ.
ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶ್ವಾಲ್ಯದಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟೆ ಬರಿದಾಗತೊಡಗಿತ್ತು. ಜನರಿಗೆ ನೀರು ಒದಗಿಸಲು ಸಮತೋಲನ ಜಲಾಶಯವಾಗಿ ಪರಿಗಣಿಸಿರುವ ಬಿಳಿಯೂರು ಅಣೆಕಟ್ಟೆಯಿಂದ ನೀರು ಒದಗಿಸುವ ಅನಿರ್ವಾಯತೆಗೆ ಒಳಗಾದ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ಕ್ರಮ ಕೈಗೊಂಡಿದೆ.
ಬುಧವಾರದವರೆಗೆ ಅಣೆಕಟ್ಟೆಯಲ್ಲಿ 4 ಮೀಟರ್ ವರೆಗೆ ಹಲಗೆ ಅಳವಡಿಸಲಾಗಿತ್ತು. ವಿಪರೀತ ಬಿಸಿಲಿನಿಂದ ನೀರು ಆವಿಯಾಗುತ್ತಿದ್ದು, ಅಣೆಕಟ್ಟೆಯಲ್ಲಿ 3.7 ಮೀಟರ್ ವರೆಗೆ ನೀರಿನ ಸಂಗ್ರಹವಿತ್ತು. ಗುರುವಾರ ಒಂದೇ ದಿನ 2.1 ಮೀಟರ್‌ನಷ್ಟು ನೀರನ್ನು ಹರಿಯ ಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿದ್ದು ಜನರಲ್ಲಿ ಆತಂಕ ವ್ಯಕ್ತವಾಗಿದೆ.