LATEST NEWS
ನೇಪಾಳ ವಿಮಾನ ಪತನ: ಅಂದು ಸಹ ಪೈಲೆಟ್ ಆಗಿದ್ದ ಪತಿ ಸಾವು, ಇಂದು ಸಹ ಪೈಲೆಟ್ ಆಗಿ ಪತ್ನಿಯೂ ಸಾವು.!
ಕಾಠ್ಮಂಡು, ಜನವರಿ 16: ನೇಪಾಳದಲ್ಲಿ ನಡೆದ ವಿಮಾನ ಪತನದಲ್ಲಿ 72 ಮಂದಿ ಅಸುನೀಗಿದ್ದಾರೆ. ಇನ್ನೇನು ವಿಮಾನದಿಂದ ಇಳಿದು ತಮ್ಮ ಕೆಲಸ – ಕಾರ್ಯದಲ್ಲಿ ನಿರತರಾಗಬೇಕಿದ್ದ ಜನ ಒಂದು ಕ್ಷಣದಲ್ಲೇ ಸಜೀವ ದಹನವಾಗಿದ್ದಾರೆ.
ಐವರು ಭಾರತೀಯರು, 15 ಮಂದಿ ವಿದೇಶಿಗರು, ನಾಲ್ವರು ಸಿಬ್ಬಂದಿಗಳು ಸೇರಿ ಒಟ್ಟು 72 ಮಂದಿ ದುರಂತ ಅಂತ್ಯ ಕಂಡಿದ್ದಾರೆ. 72 ಮಂದಿಯಲ್ಲಿ ಇನ್ನೇನು ಒಂದು ಯಶಸ್ವಿ ಲ್ಯಾಂಡಿಂಗ್ ನಿಂದ ವರ್ಷಗಟ್ಟಲೇ ಕ್ಯಾಪ್ಟನ್ ಆಗಬೇಕೆನ್ನುವ ಕನಸನ್ನು ನನಸಾಗಿಸಬೇಕಿದ್ದ ಅಂಜು ಖತಿವಾಡ ಬೆಂಕಿ ಕೆನ್ನಾಲೆಯಲ್ಲಿ ಸಜೀವ ದಹನವಾಗಿ ಹೋದರು.
ಅದು 2006, ಜೂನ್ 21 ರ ದಿನ. ಇದೇ ಯೇಟಿ ಏರ್ ಲೈನ್ಸ್ ನಲ್ಲಿ ಸಹ ಪೈಲಟ್ ಆಗಿ ಅಂಜು ಅವರ ಗಂಡ ದೀಪಕ್ ಪೋಖ್ರೆಲ್ ವಿಮಾನದಲ್ಲಿದ್ದರು. ನೇಪಾಲಗಂಜ್‌ನಿಂದ ಜುಮ್ಲಾಗೆ ತೆರಳುತ್ತಿದ್ದ 9ಎನ್ ಇಕ್ಯೂ (9N AEQ ) ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ 6 ಮಂದಿ ಪ್ರಯಾಣಿಕರು ಹಾಗೂ 4 ಸಿಬ್ಬಂದಿಗಳು ಮೃತಪಟ್ಟಿದ್ದರು. ಈ ನಾಲ್ವರಲ್ಲಿ ಒಬ್ಬರು ಅಂಜು ಅವರ ಪತಿಯೂ ಆಗಿದ್ದರು.
ವೃತ್ತಿಯಲ್ಲಿ ಪೈಲೆಟ್ ಆಗಿದ್ದ ಅಂಜು ಗಂಡನ ನಿಧನದ ಬಳಿಕ ಕುಗ್ಗಲಿಲ್ಲ. ಹತ್ತಾರು ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ಪೈಲೆಟ್ ಆಗಲು 100 ಗಂಟೆ ವಿಮಾನ ಹಾರಿಸುವ ಅನುಭವಬೇಕು. ಇದನ್ನು ಈಗಾಗಲೇ ಬಹುತೇಕವಾಗಿ ನಿಭಾಯಿಸಿದ ಅಂಜು ರವಿವಾರ ಒಂದೇ ಒಂದು ಲ್ಯಾಂಡಿಂಗ್ ಮಾಡಿದ್ದರೆ ವಿಮಾನದ ಕ್ಯಾಪ್ಟನ್ ಆಗುತ್ತಿದ್ದರು.
ಕಳೆದ 35 ವರ್ಷಗಳಿಂದ ಅನೇಕ ಪೈಲೆಟ್ ಗಳಿಗೆ ಸಲಹೆ ನೀಡುತ್ತಾ, ತರಬೇತಿ ಕೊಡುತ್ತಿದ್ದ ಕಮಲ್ ಕೆ.ಸಿ ವಿಮಾದಲ್ಲಿ ಅನುಭವಿ ಕ್ಯಾಪ್ಟನ್ ಆಗಿದ್ದರು. ಅಂಜು ಅವರಿಗೆ ರವಿವಾರ ಕಮಲ್ ಅವರು ಈ ಹಿಂದೆ ಎಷ್ಟೋ ಪೈಲೆಟ್ ಗಳಿಗೆ ನೀಡುತ್ತಿದ್ದ ಸೂಚನೆಗಳನ್ನು ನೀಡುತ್ತಿದ್ದರು. ಇನ್ನೇನು 10 ಸೆಕೆಂಡ್ ಗಳು ವಿಮಾನ ಲ್ಯಾಂಡ್ ಆಗುತ್ತಿತ್ತು. ಒಂದು ಯಶಸ್ವಿಯಾಗಿ ವಿಮಾನ ಲ್ಯಾಂಡ್ ಆಗುತ್ತಿದ್ದರೆ ಮುಖ್ಯ ಪೈಲಟ್ ಪರವಾನಗಿ ಪಡೆದು ಕ್ಯಾಪ್ಟನ್ ಆಗುತ್ತಿದ್ದರು. ಆದರೆ ವಿಧಿಯ ಆಟದ ಮುಂದೆ ಅದು ಸಾಧ್ಯವಾಗಲೇ ಇಲ್ಲ.