ಬಿಹಾರ, ಜೂನ್ 22: ನೇಪಾಳದ ಗಡಿ ಭಾಗವಾದ ಬಿಹಾರ ರಾಜ್ಯದ ಲಾಲ್ ಬಕೇಯಾ ಪ್ರದೇಶದಲ್ಲಿ ಗಂಡಕೀ ನದಿಗೆ ನಿರ್ಮಾಣಗೊಂಡಿರುವ ಅಣೆಕಟ್ಟಿನ ನಿರ್ವಹಣೆಗೆ ನೇಪಾಲ ಸರಕಾರ ತಡೆಯೊಡ್ಡಿದೆ. ಇದರಿಂದಾಗಿ ಬಿಹಾರ ರಾಜ್ಯದ ಬಹುತೇಕ ಪ್ರದೇಶಗಳು ಪ್ರವಾಹದ ಭೀತಿಯನ್ನು ಎದುರಿಸುವಂತಾಗಿದೆ.

ನೇಪಾಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗಂಡಕೀ ನದಿ ಪ್ರವಾಹದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಈ ನಡುವೆ ಬಿಹಾರ ಸರಕಾರ ಲಾಲ್ ಬಕೇಯಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಗಂಡಕ್ ಅಣೆಕಟ್ಟಿನ ದುರಸ್ತಿ ಕಾಮಗಾರಿಯನ್ನೂ ನಡೆಸುತ್ತಿದ್ದು, ಈ ಕಾಮಗಾರಿಗೂ ಇದೀಗ ನೇಪಾಳ ಸರಕಾರ ತಡೆಯೊಡ್ಡಿದೆ. ಸರಿಯಾದ ಸಮಯಕ್ಕೆ ಅಣೆಕಟ್ಟಿನ ಕಾಮಗಾರಿಯನ್ನು ಮುಗಿಸದೇ ಹೋದಲ್ಲಿ ಬಿಹಾರ ರಾಜ್ಯದ ಹಲವು ಪ್ರದೇಶಗಳಿಗೆ ಭಾರೀ ಅನಾಹುತವಾಗುವ ಸಾಧ್ಯತೆಯೂ ಇದೆ.

ಗಂಡಕ್ ಅಣೆಕಟ್ಟಿನಲ್ಲಿ ಒಟ್ಟು 36 ಗೇಟ್ ಗಳಿದ್ದು, ಇವುಗಳಲ್ಲಿ 18 ಗೇಟ್ ಗಳು ನೇಪಾಳ ಭಾಗದಲ್ಲಿದೆ. ಅಲ್ಲದೆ ಅಣೆಕಟ್ಟಿನ ದುರಸ್ತಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನೂ ನೇಪಾಳ ಭಾಗದಲ್ಲೇ ಸಂಗ್ರಹಿಸಿಡಲಾಗಿದ್ದು, ಇದೀಗ ನೇಪಾಳ ಸರಕಾರ ಆ ಪ್ರದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿದೆ. ನೇಪಾಳ ತನ್ನ ನೂತನ ಗಡಿರೇಖೆಯನ್ನು ಅನಾವರಣಗೊಳಿಸಿದ ಬಳಿಕ ಈ ರೀತಿಯ ನಡೆಯನ್ನು ನೇಪಾಳ ಪ್ರದರ್ಶಿಸುತ್ತಿದೆ.

ನೇಪಾಳದ ಮೂಲಕ ಬಿಹಾರದ ಕೆಲವು ಜಿಲ್ಲೆಗಳ ಮೂಲಕ ಹಾದು ಹೋಗಿ ಈ ನದಿ ಗಂಗಾ ನದಿಯನ್ನು ಸೇರುತ್ತದೆ. ಆದರೆ ಇದೀಗ ಈ ನದಿಯ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದ್ದು, ಒಂದು ವೇಳೆ ನೇಪಾಳ ಸರಕಾರ ತನ್ನ ನಿರ್ಬಂಧವನ್ನು ತೆರವುಗೊಳಿಸದೇ ಹೋದಲ್ಲಿ ಬಿಹಾರದ ಹಲವು ಭಾಗಗಳು ಮುಳುಗಡೆಯಾಗುವ ಎಚ್ಚರಿಕೆಯನ್ನೂ ಬಿಹಾರ ಸರಕಾರ ನೀಡಿದೆ. ಈ ನಿಟ್ಟಿನಲ್ಲಿ ಸರಕಾರ ವಿದೇಶಾಂಗ ಇಲಾಖೆಗೆ ಪತ್ರವನ್ನೂ ಬರೆದು ಪರಿಸ್ಥಿತಿಯನ್ನು ವಿವರಿಸಿದೆ.





