Connect with us

    DAKSHINA KANNADA

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರಲ್ಲಿ ದೈವಾರಾಧನೆ – 60 ವರ್ಷಗಳ ಬಳಿಕ ಧರ್ಮ ನೇಮೋತ್ಸವ

    ಪತ್ತೂರು ಎಪ್ರಿಲ್ 2: ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರ ತವರಲ್ಲಿ ದೊಡ್ಡ ಮಟ್ಟದ ದೈವಾರಾಧನೆ ಕಾರ್ಯಕ್ರಮ ನಡೆಯುತ್ತಿದ್ದು, ಎಪ್ರಿಲ್ 6 ರಿಂದ ಎಪ್ರಿಲ್ 9 ರವರೆಗೆ  ಈ ನೇಮೋತ್ಸವ ನಡೆಯಲಿದ್ದು, ಕೋವಿಡ್ ಮಾರ್ಗಸೂಚಿಗಳ ಪಾಲನೆಗೂ ಇಲ್ಲಿ ವಿಶೇಷ ಒತ್ತು ನೀಡಲಾಗಿದೆ.

    ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮವೊಂದು ಸಿದ್ಧಗೊಂಡಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ದೈವಾರಾಧನೆಯಂದು ಈ ಗ್ರಾಮದ ಜನ ತಮ್ಮ ಮನೆಯಲ್ಲಿ ಅಡುಗೆ ಮಾಡದೆ, ಇಲ್ಲೇ ಉಟೋಪಚಾರಗಳನ್ನು ಮಾಡಬೇಕಿದೆ. 60 ವರ್ಷಗಳ ಬಳಿಕ ನಡೆಯುವ ಈ ಧರ್ಮ ನೇಮೋತ್ಸವದಲ್ಲಿ ಊರಿಗೆ ಊರೇ ಸೇರಲಿದ್ದು, ಕೋವಿಡ್ ಮಾರ್ಗಸೂಚಿಗಳ ಪಾಲನೆಗೂ ಇಲ್ಲಿ ವಿಶೇಷ ಒತ್ತು ನೀಡಲಾಗಿದೆ.

    ಈ ವಿಶೇಷ ದೈವಾರಾಧನೆ ನಡೆಯಲಿರುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಮನೆಯಲ್ಲಿ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂಜಾಡಿಯಲ್ಲಿರುವ ನಳಿನ್ ಕುಮಾರ್ ಕಟೀಲರ ಈ ಕುಟುಂಬದಲ್ಲಿ ಹಲವಾರು ದೈವಗಳ ಆರಾಧನೆಯಿದೆ. ಸುಮಾರು 13 ಕ್ಕೂ ಮಿಕ್ಕಿದ ದೈವಗಳ ಆರಾಧನೆಯಲ್ಲಿ ಈ ಕುಟುಂಬ ಮಾಡಿಕೊಂಡು ಬರುತ್ತಿದ್ದು, ಕಳೆದ 60 ವರ್ಷಗಳಿಂದ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು. ಇದೀಗ ಈ ಬಾರಿ ಮತ್ತೆ ಈ ಆಚರಣೆಯನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಆಚರಣೆಯ ಸಂಪೂರ್ಣ ಉಸ್ತುವಾರಿಯನ್ನು ಹೊತ್ತಿದ್ದಾರೆ. ಎಪ್ರಿಲ್ 6 ರಿಂದ ಈ ದೈವಾರಾಧನೆಯ ಆಚರಣೆಗಳು ಆರಂಭಗೊಳ್ಳಲಿದ್ದು, ಇದನ್ನು ಧರ್ಮ ನೇಮೋತ್ಸವ ಎಂದೂ ಕರೆಯಲಾಗುತ್ತಿದೆ. ಈ ದೈವಾರಾಧನೆಗೆ ಸಮಾಜದಿಂದ ಯಾವುದೇ ರೀತಿಯ ದೇಣಿಗೆಯನ್ನು ಪಡೆಯದೆ, ಇಡೀ ಸಮಾಜವನ್ನು ಈ ದೈವಾರಾಧನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಈ ದೈವಾರಾಧನೆಯಂದು ಹಲವರಿಗೆ ಧರ್ಮ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅತ್ಯಂತ ಅದ್ಧೂರಿಯಾಗಿ ಈ ಆಚರಣೆಯನ್ನು ನಡೆಸಲು ತೀರ್ಮಾನಿಸಲಾಗಿತ್ತಾದರೂ, ರಾಜ್ಯದಲ್ಲಿ ಕೊರೊನಾ ದ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಚರಣೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಕೋವಿಡ್ ನ ಎಲ್ಲಾ ಮಾರ್ಗಸೂಚಿಗಳನ್ನೂ ಪಾಲಿಸಿಕೊಂಡು ಈ ದೈವಾರಾಧನೆಯನ್ನು ನಡೆಸಲು ನಳಿನ್ ಕುಮಾರ್ ಕಟೀಲ್ ಕುಟುಂಬ ತೀರ್ಮಾನಿಸಿದೆ.

    ದೈವಾರಾಧನೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಕಾರಣಕ್ಕಾಗಿ ಸುಮಾರು 102 ಎಕರೆ ಪ್ರದೇಶದಲ್ಲಿ ಜನರು ಆರಾಮವಾಗಿ ಸಾಮಾಜಿಕ ಅಂತರ ಪಾಲಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 5 ಸಾವಿರ ಜನ ಪಾಲ್ಗೊಳ್ಳಬೇಕಾದ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಮಿಕ್ಕಿದ ಜನ ಪಾಲ್ಗೊಳ್ಳಬಹುದಾದ ಬೃಹತ್ ಪಂಡಾಲ್ ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಜನ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ದೈವಾರಾಧನೆಯ ಹಿನ್ನಲೆಯಲ್ಲಿ ನಡೆಯುವ ಅನ್ನದಾನ ವ್ಯವಸ್ಥೆಯನ್ನೂ ಒಂದೇ ಕಡೆ ಮಾಡದೆ, ಬೇರೆ ಬೇರೆ ಕಡೆಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.

    ದೈವಾರಾಧನೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿಯೊಬ್ಬನಿಗೂ ಸ್ಯಾನಿಟೈಸರ್ ಸಿಂಪಡಿಸುವ ಯಂತ್ರಗಳು, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕುಂಜಾಡಿ ಹಾಗೂ ಸುತ್ತಮುತ್ತಲಿನ 19 ಗ್ರಾಮಗಳಿಗೆ ಈ ದೈವಾರಾಧನೆ ಆಮಂತ್ರಣ ಪತ್ರಿಕೆಯನ್ನೂ ವಿತರಿಸಲಾಗಿದೆ. ಅಲ್ಲದೆ ಕುಂಜಾಡಿ ಆಸುಪಾಸಿನ ಮೂರು ಗ್ರಾಮಗಳ ಜನರ ಮನೆಯಲ್ಲಿ ದೈವಾರಾಧನೆ ಮುಗಿಯುವ ತನಕ ಅಡುಗೆ ಮಾಡದಂತೆ ಮನವಿ ಮಾಡಲಾಗಿದೆ. ಈ ಮೂರೂ ಗ್ರಾಮದ ಜನರಿಗೆ ಕುಂಜಾಡಿಯ ಧರ್ಮ ನೇಮೋತ್ಸವದಲ್ಲೇ ತಮ್ಮ ಊಟೋಪಚಾರಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

    ಎಪ್ರಿಲ್ 6 ರಿಂದ ಎಪ್ರಿಲ್ 9 ರ ವರೆಗೆ ಈ ದೈವಾರಾಧನೆ ಕಾರ್ಯಕ್ರಮವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವೂ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಗಳನ್ನು ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply