DAKSHINA KANNADA
ನೆಹರೂ ಮೈದಾನ ಧ್ವಜ ಸ್ತಂಭಕ್ಕೆ ನಾಲ್ಕು ದಶಕಗಳ ಬಳಿಕ ಕಾಯಕಲ್ಪ

ಮಂಗಳೂರು, ಆಗಸ್ಟ್ 04 : ಹಲವು ದಶಕಗಳ ಬಳಿಕ ನೆಹರೂ ಮೈದಾನ ಧ್ವಜ ಸ್ತಂಭಕ್ಕೆ ಕಾಯಕಲ್ಪ ನೀಡಲು ಮಂಗಳೂರು ಮಹಾ ನಗರ ಪಾಲಿಕೆ ಮುಂದಾಗಿದೆ. ಜಿಲ್ಲಾಡಳಿತ ವತಿಯಿಂದ ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಈ ಧ್ವಜ ಸ್ತಂಭದಲ್ಲೇ ನಡೆಯುತ್ತಿತ್ತು. ತೀರ ಹಳೇಯದಾದ ಧ್ವಜ ಸ್ತಂಭದ ಕಟ್ಟೆಯಲ್ಲಿ ಬಿರುಕು ಉಂಟಾಗಿ ಶಿಥಿಲಾವಸ್ಥೆಗೆ ಹೋಗಿತ್ತು. ಸುಮಾರು ನಾಲ್ಕುವರೆ ದಶಕಗಳ ಹಳೇಯದಾದ ಈ ಕಟ್ಟೆಗೆ ಹಲವು ಬಾರಿ ಸುಣ್ಣ ಬಣ್ಣ ಬಳಿಯಲಾಗಿತ್ತು. ಈಗ ಮಹಾನಗರ ಪಾಲಿಕೆಯು ನೆಹರು ಮೈದಾನಿನ ಧ್ವಜ ಸ್ತಂಭದ ಕಟ್ಟೆಯನ್ನು ಒಡೆದು ನೂತನ ಕಟ್ಟೆ ನಿರ್ಮಿಸುತ್ತಿದೆ. ಧ್ವಜ ಸ್ತಂಭದ ಸುತ್ತ ಲಿನ 18 ಅಡಿ ಸುತ್ತಳತೆಯಲ್ಲಿ ಕೆಂಪು ಕಲ್ಲಿನಲ್ಲಿದ್ದ ಕಟ್ಟೆಯನ್ನು ಒಡೆದು ಕಪ್ಪು ಕಲ್ಲಿನಲ್ಲಿ ಒಂದು ಅಡಿ ಹೆಚ್ಚುವರಿಯಾಗಿ ಕಟ್ಟಲಾಗುತ್ತಿದೆ. . ಪ್ರಸ್ತುತ ಧ್ವಜ ಸ್ತಂಭದ ಸುತ್ತಲಿದ್ದ ಕೆಂಪು ಕಲ್ಲಿನ ಕಟ್ಟೆ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ. ಕಟ್ಟೆಯ ನಾಲ್ಕು ಬದಿಯಲ್ಲೂ ಸುಂದರ ವಿನ್ಯಾಸವಿರಲಿದೆ. ಕಟ್ಟೆಯ ನಾಲ್ಕು ಬದಿಗೂ ಸಣ್ಣದಾಗಿ ರೇಲಿಂಗ್ ಅಳವಡಿಸುತ್ತಿದ್ದು, ಇದು ಕಟ್ಟೆಯ ಅಂದವನ್ನು ಇನ್ನೂ ಹೆಚ್ಚಿಸಲಿದೆ.
ಸುಂದರ ಶಿಲ್ಪಗಳಿಗೆ ಹೆಸರುವಾಸಿಯಾದ ಉಡುಪಿ ಕಾರ್ಕಳದಿಂದ ಧ್ವಜ ಸ್ತಂಭದ ಸುತ್ತಲಿನ ಕಟ್ಟೆಗಾಗಿ ಶಿಲಾ ಕಲ್ಲುಗಳನ್ನು ತರಿಸಲಾಗಿದೆ.ಬುಧವಾರದಿಂದ ಕಾಮಗಾರಿ ಪ್ರಾರಂಭವಾಗಿದ್ದು ಒಂದು ವಾರದೊಳಗೆ ಪೂರ್ಣಗೊಳ್ಳಲಿದ್ದು, ಇದೇ ಆಗಸ್ಟ್ 15 ರ 70 ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ನೂತನ ಕಟ್ಟೆ ಸಿದ್ದಗೊಳ್ಳಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಅವರು ಇದೇ ನೆಹರೂ ಮೈದಾನ ಧ್ವಜ ಸ್ತಂಭ ಕಟ್ಟೆಯ ಮೇಲಿಂದ ಧ್ವಜಾರೋಹಣ ನೆರವೇರಿಸಲಿದ್ದಾರೆ.