BELTHANGADI
ತುಂಬು ಕುಟುಂಬದ ಆಧಾರಸ್ತಂಭ ಕುಸಿಯುವ ಹಂತದಲ್ಲಿ, ಬಡ ಕುಟುಂಬಕ್ಕೆ ಬೇಕಿದೆ ನೆರವಿನ ಆಸರೆ…..
ಬೆಳ್ತಂಗಡಿ ಅಕ್ಟೋಬರ್ 1 : ಕಷ್ಟವಿಲ್ಲದ ಜನ, ಮನೆ ಇರೋದು ಕಡಿಮೆಯೇ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಬಡ ಕುಟುಂಬಕ್ಕೆ ಕಷ್ಟಗಳ ಸರಮಾಲೆಯೇ ಸುತ್ತಿಕೊಂಡಿದೆ. ತುಂಬು ಕುಟುಂಬಕ್ಕೆ ಆಧಾರ ಸ್ತಂಬವಾಗಿರುವ ಮನೆಯ ಯಜಮಾನನೇ ಇದೀಗ ಕುಸಿದು ಬೀಳುವ ಹಂತದಲ್ಲಿದ್ದಾನೆ.
ಕಷ್ಟ ಅನ್ನೋದು ಎಲ್ಲಾ ಜನರಲ್ಲೂ, ಮನೆಗಳಲ್ಲೂ ಕಂಡು, ಕೇಳಿ ಬರುವ ಸಾಮಾನ್ಯ ವಿಷಯವೇ. ಕಷ್ಟವಿಲ್ಲದ ಜನ, ಮನೆ ಇರೋದು ಸಾಧ್ಯವೇ ಇಲ್ಲ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಸಮೀಪದ ಅಂಡೆತ್ತಡ್ಕ ಎಂಬ ಕುಗ್ರಾಮದ ಬಡ ಕುಟುಂಬಕ್ಕೆ ಮಾತ್ರ ಕಷ್ಟ ಅನ್ನೋದು ಬರ ಸಿಡಿಲಿನಂತೆ ಬಡಿದಿದೆ. ಎಂಟು ಜನರಿರುವ ಈ ಕುಟುಂಬದ ಆಧಾರಸ್ತಂಭವೀಗ ಕುಸಿದು ಬೀಳುವ ಹಂತಕ್ಕೆ ತಲುಪಿದ್ದಾರೆ. ಹೌದು ಮನೆಯ ಯಜಮಾನ ಸೇಸಪ್ಪ ಗೌಡ ಅಡಿಕೆ ಮರದಿಂದ ಅಡಿಕೆ ಮರಕ್ಕೆ ಜಿಗಿದು, ಅಡಿಕೆ ಕೀಳುವ, ಮದ್ದು ಬಿಡುವ ಕಾಯಕವನ್ನು ಮಾಡಿಕೊಂಡಿದ್ದವರು. ಆದರೆ ಈ ಸೇಸಪ್ಪ ಗೌಡರಿಗೆ ಇದೀಗ ಒಂದು ಹೆಜ್ಜೆಯೂ ನಡೆಯಲಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ತನ್ನ ತೊಡೆ ಭಾಗದಲ್ಲಿ ಗಡ್ಡೆಯೊಂದು ಮೂಡಿರುವುದು ಸೇಸಪ್ಪ ಗೌಡರ ಗಮನಕ್ಕೆ ಬಂದಿತ್ತು.
ಸಾಮಾನ್ಯವಾಗಿ ತೊಡೆಯಲ್ಲಿ ಮೂಡುವ ಗಡ್ಡೆಯಾಗಿರಬಹುದು ಎಂದು ಊರಿನ ವೈದ್ಯರಲ್ಲಿ ಮದ್ದು ಪಡೆದು ಮತ್ತೆ ಅಡಿಕೆ ಮರ ಹತ್ತಿದ್ದರು. ಆದರೆ ಈ ಗಡ್ಡೆ ದಿನ ಕಳೆದಂತೆ ಬೃಹದಾಕಾರದಲ್ಲಿ ಬೆಳೆಯುತ್ತಿರುವುದು ಸೇಸಪ್ಪ ಗೌಡರ ಕುಟುಂಬಕ್ಕೆ ತಲೆ ನೋವಾಗಿ ಪರಿಣಮಿಸಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಾಗ ಗಡ್ಡೆ ತೊಡೆ ಕ್ಯಾನ್ಸರ್ ಎಂದು ತಿಳಿದು ಬಂದಿತ್ತು. ಚಿಕಿತ್ಸೆಯಿಂದ ಗಡ್ಡೆಯನ್ನು ತೆಗೆಯಲು ಸಾಧ್ಯ ಎಂದ ವೈದ್ಯರ ಸಲಹೆಯಂತೆ ಕಿಮೋಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯಲಾಗಿತ್ತು. ಆದರೆ ಕೊಂಚ ದಿನದಲ್ಲೇ ಮತ್ತೆ ಗಡ್ಡೆ ಬೆಳೆಯಲಾರಂಭಿಸಿದ್ದು, ಇದೀಗ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದ ಕಾರಣ ತನ್ನ ತುಂಬು ಕುಟುಂಬಕ್ಕೆ ಏನನ್ನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಸೇಸಪ್ಪ ಗೌಡ.
ತನ್ನ ಮುದಿ ವಯಸ್ಸಿನ ತಾಯಿ ಹಾಗೂ ಸಹೋದರರ ಜೊತೆಗೆ ತನ್ನ ಪತ್ನಿ ಹಾಗೂ ನಾಲ್ಕು ಮಕ್ಕಳ ತುಂಬು ಸಂಸಾರ ನಿರ್ವಹಣೆ ಹೊತ್ತಿರುವ ಸೇಸಪ್ಪ ಗೌಡರು ಇದೀಗ ಹಾಸಿಗೆ ಹಿಡಿಯುವ ಹಂತಕ್ಕೆ ಬಂದಿದ್ದಾರೆ. ತೊಡೆಯ ಗಡ್ಡೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣ ನಡೆದಾಡಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಿದ್ದು, ಈ ಚಿಕಿತ್ಸೆಗೆ 8 ಲಕ್ಷ ರೂಪಾಯಿಗಳ ವೆಚ್ಚ ತಗುಲಲಿದೆ. ಆದರೆ ಇಷ್ಟೊಂದು ಹಣವನ್ನು ಸರಿದೂಗಿಸಲಾರದೆ ಈ ಕುಟುಂಬ ಇದೀಗ ಸಮಾಜದ ಸಹಾಯದ ನಿರೀಕ್ಷೆಯಲ್ಲಿದೆ. ಸೇಸಪ್ಪ ಗೌಡರ ಮನೆಯ ಪರಿಸ್ಥಿತಿಯನ್ನು ಕಂಡು ಮರುಗಿದ ಗ್ರಾಮಸ್ಥರು ಕುಟುಂಬಕ್ಕೆ ತನ್ನ ಕೈಯಲ್ಲಾದ ಸಹಾಯವನ್ನು ಮಾಡುವ ಮೂಲಕ ಸೇಸಪ್ಪ ಗೌಡರಿಗೆ ಸ್ಪಂದಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಬೇಕಾದಷ್ಟು ಹಣ ಈ ಸಹಾಯದಿಂದ ಒಟ್ಟುಗೂಡಿಸಲು ಸಾಧ್ಯವಾಗದೆ ಈ ಕುಟುಂಬ ಇದೀಗ ಮರುಗುತ್ತಿದೆ. ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಗ ಒದಗಿಸುವುದು ಹೇಗೆನ್ನುವ ತಳಮಳದಲ್ಲಿದೆ. ಅಲ್ಲದೆ ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಮನೆಯನ್ನು ಉಳಿಸುವುದು ಹೇಗೆ ಎನ್ನುವ ತೊಳಲಾಟದಲ್ಲಿದೆ.
ಕೇವಲ 46 ವರ್ಷದ ಆಸುಪಾಸಿನಲ್ಲಿರುವ ಸೇಸಪ್ಪ ಗೌಡರಿಗೆ ಬದುಕಿ ದುಡಿಯುವ ಛಲವಿದೆ. ಆದರೆ ನಿರಂತರವಾಗಿ ಕಾಡುತ್ತಿರುವ ಮಾರಿಯಿಂದ ಬಿಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಮಾನವೀಯತೆಯ ಸಮಾಜ ಈ ಬಡ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದೆ. ಈ ಬಡ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವ ದಾನಿಗಳು ಈ ಅಕೌಂಟಿಗೆ ನೇರವಾಗಿ ಹಣ ಪಾವತಿಸಬಹುದು.