LATEST NEWS
NCW ಸದಸ್ಯೆ, ನಟಿ ಖುಷ್ಬೂ ಸುಂದರ್‌ಗೆ ಕೇರಳದ ದೇಗುಲದಲ್ಲಿ ಪಾದ ತೊಳೆದು ನಾರಿ ಪೂಜೆ
ಕೇರಳ, ಅಕ್ಟೋಬರ್ 04 : ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ () ಸದಸ್ಯೆ ಖುಷ್ಬೂ ಸುಂದರ್ ಅವರಿಗೆ ಕೇರಳದ ದೇಗುಲದಲ್ಲಿ ನಾರಿ ಪೂಜೆ ನೆರವೇರಿಸಲಾಗಿದೆ.
ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ಸುಹಾಸಿನಿ ಪೂಜಾ ಎಂದು ಕರೆಯಲಾಗುವ ನಾರಿ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿರುವುದು ಗಮನ ಸೆಳೆದಿದೆ.
ಈ ದೇವಸ್ಥಾನದ ಆಚರಣೆಗಳ ಪ್ರಕಾರ ಪ್ರತಿ ವರ್ಷ ಒಬ್ಬ ಮಹಿಳೆಯನ್ನು ಆಮಂತ್ರಿಸಿ ಶಾಸ್ತ್ರೋಕ್ತವಾಗಿ ಪಾದಪೂಜೆ ಮಾಡಿ ವಿಧಿವಿಧಾನಗಳಂತೆ ಪೂಜೆ ನೆರವೇರಿಸಲಾಗುತ್ತದೆ. ಪೂಜಾರಿಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಇಲ್ಲಿ ವಿಶೇಷ. ಈ ವೇಳೆ ಪೂಜಾರಿಗಳು ಖುಷ್ಬೂ ಅವರ ಪಾದಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.
ಈ ವಿಷಯವನ್ನು ಖುಷ್ಬೂ ಅವರು X ತಾಣದಲ್ಲಿ ಹಂಚಿಕೊಂಡಿದ್ದು, ‘ವಿಷ್ಣುಮಾಯಾ ದೇವಸ್ಥಾನದವರು ನಾರಿಪೂಜೆಗೆ ನನ್ನನ್ನು ಆಮಂತ್ರಿಸಿದ್ದು ನಿಜಕ್ಕೂ ನನ್ನ ಅದೃಷ್ಠ. ಇದಕ್ಕಾಗಿ ನಾನು ವಿನೀತಳಾಗಿದ್ದೇನೆ. ಇಂತಹ ಗೌರವವನ್ನು ನೀಡಿದ್ದಕ್ಕೆ ದೇವಸ್ಥಾನಕ್ಕೆ ನಾನು ನಮಿಸುವೆ.
ಕೆಟ್ಟದನ್ನು ಅಳಿಸಿ ಒಳ್ಳೆಯದನ್ನು ಪಸರಿಸಲು ಹಾಗೂ ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ. ನಾರಿಪೂಜೆಯಿಂದ ಮನುಕುಲಕ್ಕೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ. ಸ್ವರ್ಗದಿಂದಲೇ ದೇವತೆ ಬಂದು ಪಾದಪೂಜೆ ಮಾಡಿಸಿಕೊಳ್ಳುತ್ತಾಳೆ ಎಂದು ನಾರಿ ಪೂಜೆ ಬಗೆಗೆ ದೇವಸ್ಥಾನದ ಪೂಜಾರಿಗಳ ನಂಬುಗೆಯಾಗಿದೆ.
1970 ರಲ್ಲಿ ಮುಂಬೈ ಮೂಲದ ಕುಟುಂಬದಲ್ಲಿ ಜನಿಸಿದ್ದ ಖುಷ್ಬೂ ಅವರ ಬಾಲ್ಯದ ಹೆಸರು ನಖತ್ ಖಾನ್. ನಟಿಯಾಗಿ, ನಿರ್ಮಾಪಕಿ, ರಾಜಕಾರಣಿಯಾಗಿ ಹೆಸರು ಮಾಡಿರುವ ಅವರು ಬಿಜೆಪಿ ಸೇರಿ ಕಳೆದ ಫೆಬ್ರುವರಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.