DAKSHINA KANNADA
ಕರ್ನಾಟಕ ಕರಾವಳಿಯಲ್ಲಿ ಮತ್ತೆ ಸಕ್ರೀಯರಾದ ನಕ್ಸಲರು, ಉಡುಪಿ ಕೊಲ್ಲೂರಿನಲ್ಲಿ ಶಸ್ತ್ರಸಜ್ಜಿತರಾಗಿ ಓಡಾಟ..!
ಉಡುಪಿ : ದಶಕದಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆಗಿದ್ದು ಉಡುಪಿಯ ಬೈಂದೂರು ಭಾಗದಲ್ಲಿ ಓಡಾಟ ಆರಂಭವಾಗಿದೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ನಕ್ಸಲರ ಓಡಾಟದ ಸುಳಿವು ಸಿಕ್ಕಿದೆ. ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮಗಳ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಶಸ್ತ್ರ ಸಜ್ಜಿತ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನಕ್ಸಲರು ಸಕ್ರಿಯ ಆಗಿದ್ದಾರೆ ಎನ್ನಲಾಗಿದೆ. ದಶಕದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿದೆಯಾ? ಎಂಬ ಅನುಮಾನ ಮೂಡಿದೆ. ನಕ್ಸಲರ ಓಡಾದ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸರು ಆಕ್ಟಿವ್ ಆಗಿದ್ದಾರೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಕೇರಳದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದ್ದ ಪರಿಣಾಮ ಅಲ್ಲಿನ ನಕ್ಸಲರು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು ಯಾರೇ ಅಪರಿಚಿತರು ಗ್ರಾಮದಲ್ಲಿ ಓಟಾಟ ನಡೆಸಿದ್ರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಕೇರಳ ಪೊಲೀಸರ ಕಾರ್ಯಾಚರಣೆಯಿಂದ ಹೆದರಿದ್ರಾ ನಕ್ಸಲರು..!
ಕಳೆದ ನವೆಂಬರ್ ತಿಂಗಳಲ್ಲಿ ಕೇರಳದ ವಯನಾಡಿನಲ್ಲಿ ಕಾಣಿಸಿಕೊಂಡ ನಕ್ಸಲರನ್ನು ಬೆನ್ನಟ್ಟಿದ ಕೇರಳ ಪೊಲೀಸರು ಕರ್ನಾಟಕ ಮೂಲದ ಶ್ರೀಮತಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಉಳಿದ ಇಬ್ಬರು ತಪ್ಪಿಸಿಕೊಂಡಿದ್ದರು. ಕೇರಳ ಪೊಲೀಸರ ಕಾರ್ಯಾಚರಣೆಗೆ ಹೆದರಿ ಈ ನಕ್ಸಲರು ಕರ್ನಾಟಕ ಪ್ರವೇಶ ಮಾಡಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ವಯನಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವಿನ ಚಕಮಕಿಯ ವೇಳೆ ಕರ್ನಾಟಕದ ಶ್ರೀಮತಿ ಅಲಿಯಾಸ್ ಉನ್ನಿಮಾಯಾ, ತಮಿಳುನಾಡಿನ ಚಂದ್ರು, ಅನೀಷ್ ಬಾಬು ಅಲಿಯಾಸ್ ತಂಪಿ ಅವರನ್ನು ಬಂಧಿಸಲಾಗಿತ್ತು. ಶ್ರೀಮತಿ ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಬೆಳಗೋಡಿನ ಕೂಡಿಗೆ ನಿವಾಸಿಯಾಗಿದ್ದಾಳೆ.