LATEST NEWS
ಕದ್ರಿಯಲ್ಲಿ ರಾಷ್ಟ್ರ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ
ಕದ್ರಿಯಲ್ಲಿ ರಾಷ್ಟ್ರ ಮಟ್ಟದ “ಶ್ರೀಕೃಷ್ಣ ವೇಷ ಸ್ಪರ್ಧೆ”
ಮಂಗಳೂರು ಸೆಪ್ಟೆಂಬರ್ 2: ನೆನೆದವರ ಮನದಲ್ಲಿ ನೋಡುವ ಎಲ್ಲೆಲ್ಲೂ ಭಗವಂತನಿರುತ್ತಾನೆ ಎನ್ನುವಂತೆ ಅಲ್ಲಿ ಎಲ್ಲೆಡೆ ಕೃಷ್ಣನೇ ಕಂಡು ಬರುತಿದ್ದನು. ಹೌದು ಇದು ಮಂಗಳೂರಿನ ಕದ್ರಿ ದೇವಾಲಯದ ವಠಾರದಲ್ಲಿ ಕಂಡು ಬಂದ ಚಿತ್ರಗಣಗಳಿವು, ಕಲ್ಕೂರ ಪ್ರತಿಷ್ಠಾನ ಆಯೋಜಿಸಿಕೊಂಡು ಬಂದಿರುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸುವ ಮೂಲಕ ಕೃಷ್ಣ ಲೋಕವನ್ನೇ ಸೃಷ್ಠಿಸಿದ್ದರು.
ಮಂಗಳೂರಿನ ಕಲ್ಕೂರ್ ಪ್ರತಿಷ್ಠಾನ ಕಳೆದ ಮೂರು ದಶಕಗಳಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ವಯೋಮಾನದವರಿಗಾಗಿ ರಾಷ್ಟ್ರಮಟ್ಟದ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತಿದೆ. ಕದ್ರಿಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿ ನಡೆದ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೇವಲ ದಕ್ಷಿಣಕನ್ನಡ ಜಿಲ್ಲೆಯ ಜನ ಮಾತ್ರವಲ್ಲದೇ ಇತರ ರಾಜ್ಯಗಳಿಂದಲೂ ಜನರು ಪಾಲ್ಗೊಳ್ಳುತ್ತಾರೆ.
ಸ್ಪರ್ಧೆಗಾಗಿ ಇಲ್ಲಿ ಮಕ್ಕಳು ಭಾಗವಹಿಸುವುದಕ್ಕೆ ಬದಲು ಈ ಸ್ಪರ್ಧೆಗೆ ಭಾವನಾತ್ಮಕವಾದ ಸಂಬಂಧಗಳನ್ನು ಜೋಡಿಸಲಾಗಿದೆ. ಈ ಹಿಂದೆ ಈ ಸ್ಪರ್ಧೆಯಲ್ಲಿ ಮಕ್ಕಳು ಹಾಗೂ ಯುವತಿಯರು ಮದುವೆಯಾದ ಬಳಿಕ ತಮ್ಮ ಮಕ್ಕಳ ಜೊತೆಗೆ ಇಲ್ಲಿಗೆ ಆಗಮಿಸಿ ಅವರನ್ನು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅಣೆ ಮಾಡುವುದು ಈ ಸ್ಪರ್ಧೆಯ ವಿಶೇಷವೂ ಆಗಿದೆ.
ಜಾತಿ, ಧರ್ಮ, ಕುಲ ಗೊತ್ರಗಳ ಎಲ್ಲೆಯನ್ನು ಮೀರಿ ಜನರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ವಯೋಮಾನಕ್ಕೆ ತಕ್ಕಂತೆ ಇಲ್ಲಿ ಸ್ಪರ್ಧೆಯಿದ್ದು ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಯಕ್ಷಕೃಷ್ಣ, ರಾಧಾ ಕೃಷ್ಣ, ಯಶೋಧಾಕೃಷ್ಣ ಹೀಗೆ ಸ್ಪರ್ಧೆಗಳನ್ನು ವಿಭಾಗಿಸಲಾಗಿದೆ.
ಇದೊಂದು ಸ್ಪರ್ಧೆ ಮಾತ್ರವಾಗಿರದೇ ಇಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಬಹುಮಾನಗಳನ್ನು ನೀಡಲಾಗುತ್ತಿದ್ದು ಸ್ಪರ್ಧಾ ಮನೋಭಾವವನ್ನು ಬೆಳೆಸುವ ಆಶಯವೂ ಇದರದ್ದಾಗಿದೆ.