LATEST NEWS
ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್

ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್
ಮಂಗಳೂರು ಅಕ್ಟೋಬರ್ 3: ಇಂಡಿಯನ್ ಕರಾಟೆ ಹಬ್ಬಕ್ಕೆ ಮಂಗಳೂರು ಸಜ್ಜಾಗಿದೆ. ಇಂಡಿಯನ್ ಕರಾಟೆ ಚಾಂಪಿಯನ್ ಶಿಫ್ 2017 ಈ ಸಲ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದ್ದು , ನಾಳೆಯಿಂದ ನಡೆಯುವ ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆಗೆ ಸಿದ್ದತೆ ಪೂರ್ಣಗೊಂಡಿದೆ.
ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ‘ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ 2017 ‘ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ.

ಪುರುಷರು ಹಾಗೂ ಮಹಿಳಾ ವಿಭಾಗಗಳಲ್ಲಿ ಈ ಪಂದ್ಯಾಟಗಳು ನಡೆಯಲಿದ್ದು ದೇಶದ 12 ಕ್ಕೂ ಅಧಿಕ ರಾಜ್ಯಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. 104 ಕ್ಕೂ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಈ ಸ್ಪರ್ಧೆಗಳಲ್ಲಿ 1200 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.
ಸ್ಪರ್ಧೆಗಳಿಗಾಗಿ 4 ಫೈಟ್ ರಿಂಗ್ ಗಳನ್ನು ನಿರ್ಮಿಸಲಾಗಿದ್ದು ಟೀಮ್ ಕಟಾ, ಟೀಮ್ ಕುಮಿಟೆ ,ವೈಯಕ್ತಿಕ ಕಟಾ ,ಗ್ರೂಪ್ ಚಾಂಪಿಯನ್ ವಿಭಾಗಗಳ ಸಹಿತ ಹಲವು ವಿಭಾಗ ಗಳಲ್ಲಿ ಸ್ಪರ್ದೆಗಳು ನಡೆಯಲಿದೆ. ಮಲೇಷ್ಯಾದಿಂದ ಸಿನಾನ್ ವಸಂತನ್ ಅವರು ತೀರ್ಪುಗಾರರಾಗಿ ಈ ಪಂದ್ಯಾಟಗಳಲ್ಲಿ ಭಾಗವಹಿಸಲಿದ್ದಾರೆ.
4 ಫೈಟ್ ರಂಗಗಳಲ್ಲಿ ಏಕಕಾಲಕ್ಕೆ ಪಂದ್ಯಾವಳಿಗಳು ನಡೆಯಲಿದ್ದು ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ಈ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಈ ಸ್ಪರ್ದೆಯ ವಿಶೇಷವಾಗಿದೆ .ರಾಷ್ಟ್ರೀಯ ಮಟ್ಟದ ಈ ಕರಾಟೆ ಸ್ಪರ್ಧೆಗಳಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.