FILM
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು
ಚೆನ್ನೈ, ಜುಲೈ 21: ಆರು ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿರತ್ನಂ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಮಣಿರತ್ನಂ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ಇತ್ತೀಚೆಗಷ್ಟೇ ಮಣಿರತ್ನಂ ಅವರು ಆ್ಯಕ್ಷನ್ ಕಟ್ ಹೇಳಿರುವ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದೆ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ತಮಿಳಿನ ಕಾದಂಬರಿ ‘ಪೊನ್ನಿಯನ್ ಸೆಲ್ವನ್’ ಚಿತ್ರವನ್ನು ಸಿನಿಮಾ ಮಾಡಬೇಕೆಂಬುವುದು ಮಣಿರತ್ನಂ ಅವರ ಬಹುದಿನಗಳ ಕನಸಾಗಿತ್ತು. ‘ಪೊನ್ನಿಯನ್ ಸೆಲ್ವನ್’ ಚಿತ್ರ 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆಯಾಗಿದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ತ್ರಿಶಾ, ಜಯರಾಮ್, ಐಶ್ವರ್ಯ ಲಕ್ಷ್ಮಿ, ಆರ್. ಶರತ್‍ಕುಮಾರ್ ಮತ್ತು ಶೋಭಿತಾ ಧೂಳಿಪಾಲ ನಟಿಸಿದ್ದಾರೆ. ಚಿತ್ರದ ಟೀಸರ್ ಮತ್ತು ಪೋಸ್ಟರ್‌ಗಳಿಗೆ ಜನರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು ಹತ್ತು ವರ್ಷದಿಂದ ಈ ಸಿನಿಮಾ ಮಾಡಲು ಮನಿರತ್ನಂ ಅವರು ತಯಾರಿ ನಡೆಸುತ್ತಿದ್ದರು. ಒಟ್ಟಾರೆ ಈ ಸಿನಿಮಾ ಹಲವಾರು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಕನ್ನಡದ ‘ಪಲ್ಲವಿ ಅನುಪಲ್ಲವಿ’ ಸಿನಿಮಾ ಮೂಲಕ ಮಣಿರತ್ನಂ ಅವರು 1983ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. 1986ರಲ್ಲಿ ಮಣಿರತ್ನಂ ಅವರು ನಿರ್ದೇಶಿಸಿದ್ದ ತಮಿಳಿನ ‘ಮೌನ ರಾಗಂ’ ಚಿತ್ರ ಭಾರೀ ಯಶಸ್ಸು ಕಂಡಿತ್ತು. 1988ರಲ್ಲಿ ಮಣಿರತ್ನಂ ಅವರು ನಟಿ ಸುಹಾಸಿನಿ ಅವರನ್ನು ವಿವಾಹವಾದರು. ಈ ಜೋಡಿಗೆ ನಂದನ್ ಎಂಬ ಪುತ್ರನಿದ್ದಾನೆ.