DAKSHINA KANNADA
ನಾರ್ಶ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣ -ಮತ್ತೆ ಇಬ್ಬರು ಆರೋಪಿಗಳು ಅರೆಸ್ಚ್
ವಿಟ್ಲ ಫೆಬ್ರವರಿ 05: ನಾರ್ಶದಲ್ಲಿ ನಡೆದ ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಕೇರಳ ಕೊಲ್ಲಂನ ಶಬಿನ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ. ಆರೋಪಿ ಶಬಿನ್ ಎಂಬಾತನನ್ನು ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆತ ವಿಮಾನ ನಿಲ್ದಾಣಕ್ಕೆ ಬಂದಾಗ ಮಫ್ತಿಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದ್ದಾರೆ. ಸಚಿನ್‌ನನ್ನು ವಿಟ್ಲ ಪೊಲೀಸರ ತಂಡ ಮುಂಬಯಿಯ ಪನ್ವೇಲ್‌ನಲ್ಲಿ ಬಂಧಿಸಿದ್ದು, ಆತನಿಂದ ಸ್ಯಾಕ್ಸಿಂಗ್ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಶಬಿನ್ನನ್ನು ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡಿಸ್ ಎನ್ನುವ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳ ಬಂಧನವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಸ್ತುತ ಮೂವರು ಆರೋಪಿಗಳನ್ನು ಬಂಧಿಸಲಾ ಗಿದ್ದು, ಇನ್ನೂ ಮೂರು ಮಂದಿ ತಲೆಮರೆಸಿ ಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.