LATEST NEWS
ನಂದಳಿಕೆ ಸಿರಿ ಜಾತ್ರೆ ವಿಭಿನ್ನ ಪ್ರಚಾರ – ಪ್ರಚಾರದಲ್ಲಿ ಪಕ್ಷಿ ಪ್ರೇಮ

ಉಡುಪಿ ಮಾರ್ಚ್ 25: ಕಾರ್ಕಳ ತಾಲ್ಲೂಕಿನ ನಂದಳಿಕೆಯ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಕಾರ್ಯದಲ್ಲಿ ಪ್ರತಿವರ್ಷದಂತೆ ಈ ಭಾರಿಯೂ ವಿಭಿನ್ನ ರೀತಿ ತಂತ್ರಗಾರಿಕೆ ಬಳಲಾಗಿದ್ದು, ಈ ಬಾರಿ ಪ್ರಚಾರ ತಂತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಕಳ ತಾಲ್ಲೂಕಿನ ನಂದಳಿಕೆಯ ಮಹಾಲಿಂಗೇಶ್ವರ ದೇವಾಲಯದಲ್ಲಿ ಏಪ್ರಿಲ್ 6ರಂದು ಅದ್ಧೂರಿಯಾಗಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ಮಹೋತ್ಸವ ಹಾಗೂ ರಾಶಿಪೂಜೆ ಮಹೋತ್ಸವ ನಡೆಯುತ್ತಿದೆ. ಪ್ರತಿ ವರ್ಷವೂ ವಿಭಿನ್ನವಾದ ಪ್ರಚಾರ ತಂತ್ರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಸಿರಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರನ್ನು ಸೆಳೆಯುವ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ಗಿಟ್ಟಿಸಿರುವ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಈ ವರ್ಷವೂ ವಿಭಿನ್ನ ಪ್ರಚಾರದ ಮೊರೆ ಹೋಗಿದ್ದಾರೆ. ಈ ಬಾರಿಯ ಸಿರಿ ಜಾತ್ರಾ ಮಹೋತ್ಸವದ ಪ್ರಚಾರ ಫಲಕಗಳನ್ನು ಪಕ್ಷಿಗಳಿಗೆ ನೀರುಣಿಸುವ ಮಣ್ಣಿನ ಪಾತ್ರೆಯನ್ನೊಳಗೊಂಡಿರುವ ಕಂಬದ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಸುಮಾರು ಎರಡು ಅಡಿ ಎತ್ತರವಿರುವ ರಟ್ಟಿನಿಂದ ತಯಾರಿಸಲಾಗಿರುವ ಪ್ರಚಾರ ಫಲಕ ಪಕ್ಷಿ ಪ್ರೇಮಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಕ್ಕಿಗಳಿಗೆ ನೀರುಣಿಸುವ ಕಂಬದ ಮಾದರಿಯ ವಿಭಿನ್ನ ಪ್ರಚಾರ ಫಲಕವು ಬೇಸಗೆಯಲ್ಲಿ ಪಕ್ಷಿಗಳ ದಾಹ ತಣಿಸುವುದರ ಜತೆಗೆ ಸಿರಿ ಜಾತ್ರೆಗೆ ಬರುವಂತೆ ಭಕ್ತರಿಗೆ ಆಹ್ವಾನ ನೀಡುತ್ತಿದೆ.
ಈ ಬಾರಿ ಬೇಸಗೆಯ ಪ್ರಖರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನೀರಿನ ಅಭಾವ ಎದುರಾಗಬಾರದು ಎಂಬ ದೃಷ್ಟಿಯಿಂದ ಮಣ್ಣಿನ ಪಾತ್ರೆಯೊನ್ನಳಗೊಂಡಿರುವ ಕಂಬದ ಮಾದರಿಯ ಪ್ರಚಾರ ಫಲಕಗಳನ್ನು ಸಿದ್ಧಪಡಿಸಲಾಗಿದೆ.