KARNATAKA
ಬೆಂಗಳೂರು ನಗರಕ್ಕೆ ಶೀಘ್ರದಲ್ಲೇ ‘ನಮೋ ಭಾರತ್ ರಾಪಿಡ್ ರೈಲು’; ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು : ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಙ್ಣಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ನಿಲ್ದಾಣ (ಹಾಲ್ಟ್) – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿದರು ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ರೈಲ್ವೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಮಾನ್ಯ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ V. ಸೋಮಣ್ಣ ಅವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರೈಲು ನಿಲ್ದಾಣ (ಹಾಲ್ಟ್) – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಂಡೋ-ಟ್ರೇಲಿಂಗ್ ತಪಾಸಣೆ ನಡೆಸಿ, ಹಲವಾರು ಪ್ರಮುಖ ಕಾರ್ಯಾಚರಣೆ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು. ಸನ್ಮಾನ್ಯ ಸಚಿವರಾದ ವಿ.ಸೋಮಣ್ಣ ಅವರು ಜೊತೆಗಿದ್ದರು.
ನಂತರ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ವಿ.ಸೋಮಣ್ಣ ಅವರೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಪರಿಶೀಲನಾ ಸಭೆ ನಡೆಸಿದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪರಿಶೀಲನೆಯ ಸಂದರ್ಭದಲ್ಲಿ ಮಾನ್ಯ ಸಂಸದರಾದ ಪಿ.ಸಿ.ಮೋಹನ್ ಸಹ ಉಪಸ್ಥಿತರಿದ್ದರು.
ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಸಚಿವ ಅಶ್ವಿನಿ ವೈಷ್ಣವ್ ಅವರು ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆಯ ಮಹತ್ವವನ್ನು ಒತ್ತಿ ಹೇಳಿದರು. ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣವು ಪುನರಾಭಿವೃದ್ಧಿಯಾದ ಮೊದಲ ಪ್ರಮುಖ ರೈಲು ನಿಲ್ದಾಣವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ, ನಂತರ ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಈಗ ನಡೆಸಲಾಗುತ್ತಿದೆ. ವೈಷ್ಣವ್ ಅವರು ರೈಲ್ವೆಯು ಶೀಘ್ರದಲ್ಲೇ ಅಮೃತ್ ಭಾರತ್ ರೈಲುಗಳ ಆವೃತ್ತಿ 2.O ನ ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಸುಧಾರಣೆಗಳೊಂದಿಗೆ ಪ್ರಾರಂಭಿಸುತ್ತದೆ ಎಂದು ಹೇಳಿದರು. ಬಿಇಎಂಎಲ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಅದನ್ನು ನಿಯೋಜಿಸಲಾಗುವುದು.
ಸಭೆಯ ನಂತರ ವೈಷ್ಣವ್ ಅವರು ನಮೋ ಭಾರತ್ ರಾಪಿಡ್ ರೈಲಿನ ಬಗ್ಗೆ ಮಾತನಾಡಿ, ಇದು ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರುಗಳಂತಹ ಪರಸ್ಪರ ಹತ್ತಿರವಿರುವ ನಗರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಭವಿಷ್ಯದಲ್ಲಿ ಬೆಂಗಳೂರು ಪ್ರದೇಶದಲ್ಲೂ ಈ ರೈಲುಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು. ಹೆಚ್ಚುವರಿಯಾಗಿ, ಉಪನಗರ ರೈಲುಮಾರ್ಗದ ಎರಡು ಹಂತಗಳ ನಿರ್ಮಾಣ ಮತ್ತು ಬೆಂಗಳೂರು-ಕೃಷ್ಣರಾಜಪುರಂ-ವೈಟ್‌ಫೀಲ್ಡ್ ರೈಲುಮಾರ್ಗದ ಚತುಷ್ಪಥದ ಕಾರಣದಿಂದ ಬೆಂಗಳೂರು ನಗರದ ಸಂಚಾರ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳವನ್ನುಅವರು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯಸ್ಥಾಪಕ ಅರವಿಂದ ಶ್ರೀವಾಸ್ತವ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಜಯ್ ಶರ್ಮಾ, ವಿಭಾಗಗಳ ಪ್ರಧಾನ ಮುಖ್ಯಸ್ಥರು, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಯೋಗೇಶ್ ಮೋಹನ್ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.