LATEST NEWS
ಶಿರಾಡಿ ಘಾಟ್ ಬಂದ್….ಮಂಗಳೂರು ಬೆಂಗಳೂರು ನಡುವೆ ಹೆಚ್ಚುವರಿ ರೈಲಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ….

ಮಂಗಳೂರು ಜುಲೈ 19 ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಭೂಕುಸಿತ ಉಂಟಾಗಿದ್ದು. ಈ ಹಿನ್ನಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದು ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಜನರಿಗೆ ಸಂಕಷ್ಟ ತಂದೊಡ್ಡಿದ್ದು, ಈ ಹಿನ್ನಲೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸಂಚಾರ ಆರಂಭಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಅವರನ್ನು ಸೋಮವಾರ ನವದೆಹಲಿಯಲ್ಲಿ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ‘ನನ್ನ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭೂಕುಸಿತ ಉಂಟಾಗಿದ್ದರಿಂದ ಜುಲೈ15ರಿಂದ ಶಿರಾಡಿ ಘಾಟಿಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಕೆಲ ಷರತ್ತಿನೊಂದಿಗೆ ಕಾರು, ಜೀಪು, ಸೇರಿದಂತೆ ಸಣ್ಣ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.