DAKSHINA KANNADA
ದ.ಕ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿ : ಮಿಥುನ್ ರೈ V/s ನಳಿನ್ ಕುಮಾರ್ ಕಟೀಲ್..!!
ದ.ಕ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿ : ಮಿಥುನ್ ರೈ V/s ನಳಿನ್ ಕುಮಾರ್ ಕಟೀಲ್..!!
ಮಂಗಳೂರು, ಮಾರ್ಚ್ 21 : ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನು ಅಂತಿಮಗೊಳಿಸಿ ಕಣಕ್ಕಿಳಿಸಿದೆ. ಇದರಿಂದ ಟಿಕೆಟ್ ಸಂಬಂಧ ಕಳೆದ ಕೆಲ ದಿನಗಳಿಂದ ಇದ್ದ ಗೊಂದಲಗಳಿಗೆ ಬಿಜೆಪಿ ವರಿಷ್ಟರು ತೆರೆ ಎಳೆದಿದ್ದಾರೆ. ಕಳೆದ ಕೆಲ ದಿಗಳಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ನಳಿನ್ ಕುಮಾರ್ ಕಟೀಲ್ ಅವರು ಇಂದು ಅಧಿಕೃತವಾಗಿ ಟಿಕೆಟ್ ಘೋಷಣೆಯಾದ ಬಳಿಕ ಕಾರ್ಯಕರ್ತ ಪಡೆಯೊಂದಿಗೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಹಾಲಿ ಸಂಸದ ನಳಿನ್ ಎದುರು ಆನೇಕ ಆಕಾಂಕ್ಷಿಗಳು ಕಣದಲ್ಲಿದ್ದರು. ಮತ್ತು ಆನೇಕರು ದೆಹಲಿ ವರೆಗೂ ಲಾಭಿ ನಡೆಸಿದ್ದರು. ಆದರೆ ದೆಹಲಿಯ ರಾಜಕರಣದಲ್ಲಿ ಈಜಿ ಅನುಭವ ಹೊಂದಿದ್ದ ನಳಿನ್ ಎದುರು ಜಿಲ್ಲೆಯ ಹಾಗೂ ರಾಜ್ಯದ ಪಕ್ಷದ ಪ್ರಮುಖ ನಾಯಕರು ಹಾಗೂ ಆರ್ ಎಸ್ ಎಸ್ ಪ್ರಮುಖರು ಮಂಕಾಗಿದ್ದು, ಸೋತು ವಾಪಾಸ್ಸಾಗಿದ್ದಾರೆ, ಇದೀಗ ಎಲ್ಲವನ್ನೂ ಮರೆತು ಚುನಾವಣಾ ಪ್ರಚಾರದ ಕಣಕ್ಕೆ ಧುಮುಕ್ಕಿದ್ದಾರೆ. ಇನ್ನು ಚುನಾವಣೆಗೆ ಕೇವಲ 28 ದಿನಗಳು ಮಾತ್ರ ಬಾಕಿ ಇದ್ದು ಕರಾವಳಿ ಯ ಉಭಯ ಜಿಲ್ಲೆಗಳಲ್ಲೂ ಭಾರತೀಯ ಜನತಾ ಪಾರ್ಟಿ ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಉಡುಪಿಯಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕಣದಲ್ಲಿದ್ದಾರೆ, ಆದರೆ ಈ ಬಾರಿಯ ಸಂಸದೀಯ ಅಭ್ಯರ್ಥಿ ಎಂದು ಬಿಂಬಿತವಾಗಿದ್ದು ಕಾಂಗ್ರೆಸ್ ನಿಂದ ವಲಸೆ ಬಂದ ಜಯ ಪ್ರಕಾಶ್ ಹೆಗ್ಡೆ ಅವರ ಮುಂದಿನ ಭವಿಷ್ಯ ಏನು ಎಂಬುವುದು ಕಾದು ನೋಡಬೇಕಿದೆ.
ಕಾಂಗ್ರೆಸ್ ನಲ್ಲಿ ಇನ್ನೂ ಅನಿಶ್ಚಿತತೆ ಮೂಡಿದ್ದು ಪಕ್ಷದ ಯುವ ನಾಯಕ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನಳಿನ್ ಎದುರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ ಮಾಜಿ ಸಚಿವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಬಿ. ರಮನಾಥ ರೈ ಅವರು ಮಿಥುನ್ ರೈ ಗೆ ಪ್ರಬಲ ಪೈಪೋಟಿ ನೀಡಿ ಕೊನೆಯ ವರೆಗೂ ಟಿಕೆಟಿಗಾಗಿ ದೆಹಲಿಯ ವರೆಗೂ ಲಾಭಿ ನಡೆಸಿದ್ದರು. ಆದರೆ ಬಿಜೆಪಿ ಹಾಲಿ ಸಂಸದ ನಳಿನ್ ಎದುರು ಸ್ಪರ್ಧಿಸಲು ಗಟ್ಟಿ ಗುಂಡಿಗೆಯ ಯುವ ನಾಯಕನ ಮನಗಂಡ ಕಾಂಗ್ರೆಸ್ ಹೈ ಕಮಾಂಡ್ ಮಿಥುನ್ ರೈ ಗೆ ಟಿಕೆಟ್ ನೀಡಿ ಕಣಕ್ಕಿಳಿಸಲು ಸಿದ್ದತೆ ನಡೆಸಿದೆ. ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಇಬ್ಬರು ಬಿಸಿ ರಕ್ತದ ಯುವ ಅಭ್ಯರ್ಥಿಗಳ ಜಿದ್ದಾ ಜಿದ್ದಿನ ಕ್ಷೇತ್ರವಾಗಲಿರುವುದು ಮಾತ್ರ ಸತ್ಯ.