DAKSHINA KANNADA
ಸಿದ್ಧರಾಮಯ್ಯ ಸರಕಾರ ಭ್ರಷ್ಟರ ಕೂಟ: ನಳಿನ್ ಕುಮಾರ್ ಕಟೀಲ್ ಆರೋಪ..!

ರಾಜ್ಯದಲ್ಲಿರುವ ಸಿದ್ಧರಾಮಯ್ಯ ಸರಕಾರ ಭ್ರಷ್ಟರ ಕೂಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.
ಪುತ್ತೂರು : ರಾಜ್ಯದಲ್ಲಿರುವ ಸಿದ್ಧರಾಮಯ್ಯ ಸರಕಾರ ಭ್ರಷ್ಟರ ಕೂಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಟೀಲ್, ಸರಕಾರದ ಭ್ರಷ್ಟಾಚಾರ ಬಗ್ಗೆ ಹೇಳಿದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ.
ಸರಕಾರದ ವಿರುದ್ಧ ಬರೆದ ಮಾಧ್ಯಮಗಳು,ಸಾಮಾಜಿಕ ಜಾಲತಾಣದ ಮೇಲೂ ದಬ್ಬಾಳಿಕೆ ಮಾಡಲಾಗುತ್ತಿದೆ.
ಪರಿಶಿಷ್ಟ ಜಾತಿ, ಪಂಗಡದವರ ಜಾಗ ಕಬಳಿಸಿದ ಸಚಿವ ಸುಧಾಕರ್ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಮುಖ್ಯಮಂತ್ರಿಗಳಿಗೆ ಮಾನವಿದ್ದರೆ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಸರಕಾರವಿರುವ ಸಚಿವರ ವಿರುದ್ಧ ದೂರು ಬಂದಾಗ ರಾಜೀನಾಮೆ ಕೊಡಿಸಿದ್ದೆವು, ಆದರೆ ಈಗಿನ ಸರಕಾರದ ಎಲ್ಲಾ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ.
ಚೆಲುವರಾಯಸ್ಚಾಮಿ ವಿರುದ್ಧ ಅಧಿಕಾರಿಗಳೇ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ.
ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಕೇವಲ ಮೂರು ತಿಂಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ ಸರಕಾರ ಕಣ್ಣುಮುಚ್ಚಿ ಕುಳಿತಿದೆ, ಬರಗಾಲ ಘೋಷಣೆ ಮಾಡಲೂ ಮೀನಮೇಷ ಎಣಿಸುತ್ತಿದೆ. ಕೇವಲ 164 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ.
ಮಲೆನಾಡು,ಕರಾವಳಿ ಭಾರೀ ಮಳೆಯಾಗುವ ಪ್ರದೇಶಗಳು, ಆದರೆ ಈ ಬಾರಿ ಈ ಭಾಗದಲ್ಲೂ ಮಳೆಯಿಲ್ಲ, ನದಿಗಳೆಲ್ಲಾ ಬತ್ತಿ ಹೋಗುತ್ತಿದೆ.
ಇಡೀ ರಾಜ್ಯದಲ್ಲಿ ಬರದ ಸ್ಥಿತಿ ಇದ್ದು ಇಡೀ ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದರು.