LATEST NEWS
ಚರಂಡಿಗಳಲ್ಲಿ ಮಳೆ ನೀರು ಹರಿವಿಗೆ ತಡೆ ಒಡ್ಡಿದ್ದಲ್ಲಿ – ಪೊಲೀಸರ ನೆರವಿನಲ್ಲಿ ತೆರವುಗೊಳಿಸಿ -ನಳಿನ್

ಮಂಗಳೂರು,ಜುಲೈ 09- ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಬದಿಯ ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗಬೇಕು, ಈ ಪ್ರಕ್ರಿಯೆಗೆ ತಡೆಗಳನ್ನು ಒಡ್ಡಿದ್ದಲ್ಲೀ ನಿರ್ಧಾಕ್ಷಿಣ್ಯವಾಗಿ ಅವುಗಳನ್ನು ತೆರವು ಮಾಡಬೇಕು, ಅಗತ್ಯವಿದ್ದರೆ ಪೊಲೀಸರ ನೆರವು ಪಡೆಯುವಂತೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ನಿರ್ದೇಶನ ನೀಡಿದರು.
ನಗರದಲ್ಲಿ ಮಳೆ ನೀರು ಹರಿದು ಹೋಗದಂತೆ ಎಲ್ಲೆಲ್ಲಿ ಚರಂಡಿಗಳಿಗೆ ತಡೆಗಳನ್ನು ಒಡ್ಡಲಾಗಿದೆಯೋ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ತೆರವು ಮಾಡಬೇಕು, ಬೇಕಿದ್ದರೆ ಯಂತ್ರಗಳನ್ನು ಸಹ ಬಳಸಿಕೊಳ್ಳಿ ಎಂದ ಸಂಸದರು, ಅಗತ್ಯವಿದ್ದರೆ ಪೊಲೀಸರ ನೆರವು ಕೂಡ ಪಡೆಯುವಂತೆ ತಿಳಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು, ವಿದ್ಯುತ್ ಸೇರಿದಂತೆ ಇತರೆ ಸಮಸ್ಯೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಸಿಬ್ಬಂದಿಗಳ ದೂರವಾಣಿ, ಮೊಬೈಲ್ ನಂಬರ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಪ್ರಕಟಿಸುವಂತೆ ಸೂಚಿಸಿದರು.
ಪ್ರಾಕೃತಿಕ ಸೇರಿದಂತೆ ಯಾವುದೇ ರೀತಿಯ ಅವಘಡಗಳು ಜಿಲ್ಲೆಯಲ್ಲಿ ಸಂಭವಿಸಿದರೆ ಕೂಡಲೇ ಅಲ್ಲಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ಮಾರ್ಗದರ್ಶನ ಹಾಗೂ ಚಿಕಿತ್ಸೆಗೆ ನೆರವು ನೀಡುವಂತಹ ವೈದ್ಯರ ತಂಡವನ್ನು ಎಲ್ಲಾ ತಾಲೂಕುಗಳಲ್ಲಿಯೂ ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರಿಗೆ ತಿಳಿಸಿದರು.
ನಗರದಲ್ಲಿ ಮಳೆ ಹಾಗೂ ಪ್ರವಾಹ ಸ್ಥಿತಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ನಿಯೋಜಿಸಲಾಗಿರುವ ಮೂವರು ಎಂಜಿನಿಯರುಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಮಳೆಗಾಲವಾದ ಕಾರಣ ಯಾವುದೇ ರಸ್ತೆಗಳನ್ನು ತುಂಡರಿಸಬಾರದು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಜಿಲ್ಲಾಧಿಕಾರಿಯವರ ಪಿಡಿ ಖಾತೆಯಲ್ಲಿ 15 ಕೋಟಿ ರೂ.ಗಳ ಅನುದಾನವಿದೆ, ಪ್ರತಿ ತಾಲೂಕಿನ ತಹಶೀಲ್ದಾರರ ಖಾತೆಯಲ್ಲಿ 45 ಲಕ್ಷ ರೂ.ಗಳ ವರೆಗೆ ಹಣವಿದ್ದು, ಮಳೆ, ನೆರೆಯಿಂದಾಗಿ ಮನೆ ಹಾನೀಗೀಡಾದಲ್ಲಿ ಕೂಡಲೇ ಚೆಕ್ ಮೂಲಕ ಪರಿಹಾರ ನೀಡುವಂತೆ ಸೂಚಿಸಲಾಗಿದೆ, ಪ್ರತಿಯೊಂದು ಗ್ರಾಮ ಪಂಚಾಯತ್‍ನಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ, ವಿಪರೀತ ಮಳೆಯಿಂದಾಗಿ ಶಾಲಾ ಮಕ್ಕಳಿಗೆ ರಜೆ ನೀಡುವ ಬಗ್ಗೆ ಆಯಾ ಗ್ರಾಮ ವ್ಯಾಪ್ತಿಯಲ್ಲಿ ನಿರ್ಧರಿಸಿ ರಜೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.